========================================================
ಮಂಗಳೂರು, ಜನವರಿ.25:ಫೇಸ್‌ಬುಕ್‌ನಲ್ಲಿ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮಕ್ಕಾ-ಮದೀನಾದ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳದ ಯುವಕನೊಬ್ಬನ ಮೇಲೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಸಮೀಪದ ವಗ್ಗ ನಿವಾಸಿ ಧೀರಜ್ ಕುಮಾರ್(32) ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಕ್ಕಾ-ಮದೀನಾದಲ್ಲಿ ಇರುವುದು ಶಿವನ ಲಿಂಗ ಎಂದು ಬರೆದು 1953ನೇ ಇಸವಿಯ ಅಪರೂಪದ ಚಿತ್ರ ಎಂಬುದಾಗಿ ಹೇಳಿ ಪೋಸ್ಟ್ ಮಾಡಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆದಿದ್ದು ಧೀರಜ್ ಬಗ್ಗೆ ಹಿಂದೂ-ಮುಸ್ಲಿಂ ಉಭಯ ಸಮುದಾಯದ ಬಾಂಧವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ವಗ್ಗ-ಬಾಂಬಿಲ ನಿವಾಸಿ ಮುಹಮ್ಮದ್ ಮುಸ್ತಾಫಾ ಎಂಬವರು ಧೀರಜ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಧೀರಜ್ ಕುಮಾರ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನಾದ್ಯಂತ ಈ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಬಹಿರಂಗವಾಗಿ ಆತನಿಗೆ ಕೊಲೆ ಬೆದರಿಕೆ ಒಡ್ಡಿದ್ದಲ್ಲದೆ ಆತನ ಮೇಲೆ ಹಲ್ಲೆಗೈಯುವಂತೆ ಕರೆ ನೀಡಿದ್ದರು.

ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ಅರಿತ ಮುಸ್ಲಿಂ ಸಂಘಟನೆಗಳು ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದವು. ನಿನ್ನೆ ಸಮುದಾಯದ ಗುಂಪೊಂದು ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದ್ದ ವೇಳೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
ಈ ವೇಳೆ ಠಾಣಾಧಿಕಾರಿ ರಕ್ಷಿತ್ ಗೌಡ ಅವರು ಸ್ಥಳಕ್ಕಾಗಮಿಸಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಗಿದೆ.
ಮುಹಮ್ಮದ್ ಮುಸ್ತಾಫಾ ಧೀರಜ್ ವಿರುದ್ಧ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಧೀರಜ್ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದ್ದು ಆತನ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮುಸ್ಲಿಂ ಸಂಘಟನೆಗಳು ನೀಡಿವೆ.
Comments are closed.