ಕರಾವಳಿ

ಡಿಜಿಧನ್ ಮೇಳ ಹಿನ್ನೆಲೆ : ಮಂಗಳೂರಿನಲ್ಲಿ ಕ್ಯಾಶ್ಲೆಸ್ ಮೇಳಕ್ಕೆ ಸಚಿವ ರಮೇಶ ಜಿಗಜಿಣಗಿ ಚಾಲನೆ

Pinterest LinkedIn Tumblr

ಮಂಗಳೂರು, ಜನವರಿ.25: ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಡಿಜಿಟಲ್ ಪಾವತಿ ಹಾಗೂ ನಗದು ರಹಿತ ವ್ಯವಹಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರಕಾರದ ನೀತಿ ಆಯೋಗದ ಡಿಜಿಧನ್ ಮೇಳದ ಅಂಗವಾಗಿ ನಗರದ ಪುರಭವನದಲ್ಲಿ ಆಯೋಜಿಸಲಾದ ನಗದು ರಹಿತ ವ್ಯವಹಾರಗಳ ಪ್ರಾತ್ಯಕ್ಷಿಕೆಯ ಮಳಿಗೆಗಳನ್ನು ಕೇಂದ್ರ ಕುಡಿಯುವ ನೀರು ಸರಬರಾಜು ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಅವರು ಬುಧವಾರ ಉದ್ಘಾಟಿಸಿದರು.

ಪ್ರತಿ ಹಳ್ಳಿಯಲ್ಲಿ ಕ್ಯಾಶ್ಲೆಸ್ ವ್ಯವಹಾರ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಕೇಂದ್ರದ ಯೋಜನೆಯನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ಹೆಚ್ಚು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಕ್ಯಾಶ್ಲೆಸ್ ವ್ಯವಹಾರ ಮಾಡುವ ಮೂಲಕ ಶೇ.100ರಷ್ಟು ಸಾಧನೆ ಮಾಡುವ ಪ್ರಯತ್ನ ಮುಂದುವರಿದಿದೆ. ನಗದು ರಹಿತ ವ್ಯವಹಾರಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಪುರಭವನದ ಆವರಣದಲ್ಲಿ ಡಿಜಿಟಲ್ ಪಾವತಿಯ ವಿವಿಧ ಆಯಾಮಗಳ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, ಡಿಜಿಧನ್ ಮೇಳದಲ್ಲಿ 12 ರಾಷ್ಟ್ರೀಕೃತ ಬ್ಯಾಂಕುಗಳು, ತೈಲ ಕಂಪೆನಿಗಳು, ಸಾರ್ವಜನಿಕ ಉದ್ದಿಮೆಗಳು ಸಂಸ್ಥೆಗಳು, ಬಿಎಸ್‌ಎನ್‌ಎಲ್, ಅಂಚೆ ಇಲಾಖೆ, ಮೊಬೈಲ್ ಸಂಸ್ಥೆಗಳು ಪೆಟ್ರೋಲಿಯಂ ಮತ್ತು ಖಾಸಗಿ ಉದ್ದಿಮೆ ಸಂಸ್ಥೆಗಳು ಸೇರಿದಂತೆ ಡಿಜಿಟಲ್ ವ್ಯಾಪಾರವನ್ನು ಪ್ರೋತ್ಸಾಹಿಸುವ ಒಟ್ಟು 36 ಪ್ರದರ್ಶನಾ ಮಳಿಗೆಗಳು ಈ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಈ ಸಂಸ್ಥೆಗಳು ಸಾರ್ವಜನಿಕರಿಗೆ ತಮ್ಮ ವಿವಿಧ ಡಿಜಿಟಲ್ ಪಾವತಿಗಳ ವಿವರಗಳನ್ನು ನೀಡಿದವು. ಈ ಕಾರ್ಯಕ್ರಮ ಸಂಜೆಯವರೆಗೂ ಮುಂದುವರಿಯಿತು.

ಸಂಸದ ನಳಿನ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಂಟೀ ಕೈಗಾರಿಕಾ ನಿರ್ದೇಶಕ ಗೋಕುಲದಾಸ್ ನಾಯಕ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ವಿವಿಧ ಇಲಾಖಾಧಿಕಾರಿಗಳು ಹಾಗೂ ತೈಲ ಸಂಸ್ಥೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.