ರಾಷ್ಟ್ರೀಯ

ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ- ಅರಬ್ ನಿಲುವು ಒಂದೇ: ಪ್ರಧಾನಿ ಮೋದಿ

Pinterest LinkedIn Tumblr

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಸಮ್ಮುಖದಲ್ಲಿ 14 ಒಪ್ಪಂದಗಳಿಗೆ ಸಹಿ ಹಾಕಿ ವಿನಿಮಯ ಮಾಡಿಕೊಂಡ ಭಾರತ, ಯುಎಇ

ನವದೆಹಲಿ: ಭಯೋತ್ಪಾದನೆ ಮತ್ತು ತೀವ್ರಗಾಮಿತ್ವದ ಬಗ್ಗೆ ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ಸಮಾನ ಕಾಳಜಿ ಹೊಂದಿದ್ದು, ಸಮಾಜದ ಭದ್ರತೆಯನ್ನು ಕಾಪಾಡಲು ಹಿಂಸೆ ಮತ್ತು ಉಗ್ರಗಾಮಿತ್ವವನ್ನು ಸದೆಬಡಿಯುವುದು ಅಗತ್ಯವಿದೆ ಎಂದು ಎರಡೂ ರಾಷ್ಟ್ರಗಳು ಅರಿತುಕೊಂಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಮತ್ತು ಗಲ್ಫ್ ದೇಶಗಳ ಅಭಿವೃದ್ಧಿಗಳ ಬಗ್ಗೆ ತಾವು ಮತ್ತು ಅರಬ್ ರಾಷ್ಟ್ರದ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಶಾಂತಿ ಮತ್ತು ಸ್ಥಿರತೆಗೆ ತಾವಿಬ್ಬರೂ ಆಸಕ್ತಿ ತೋರಿಸಿರುವುದಾಗಿ ಪ್ರಧಾನಿ ಹೇಳಿದ್ದಾರೆ.

ನಮ್ಮ ಬಾಂಧವ್ಯ ಕೇವಲ ಎರಡು ದೇಶಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಸುತ್ತಮುತ್ತಲ ದೇಶಗಳಿಗೂ ಮುಖ್ಯವಾಗಿರುತ್ತದೆ. ನಮ್ಮಲ್ಲಿನ ಒಗ್ಗಟ್ಟು ಪ್ರದೇಶದ ಸ್ಥಿರತೆಗೆ ಸಹಾಯವಾಗಲಿದೆ. ಮತ್ತು ನಮ್ಮ ಆರ್ಥಿಕ ಸಹಭಾಗಿತ್ವ ಸ್ಥಳೀಯ ಮತ್ತು ಜಾಗತಿಕ ಸಮೃದ್ಧಿಗೆ ಮೂಲವಾಗಿರುತ್ತದೆ ಎಂದು ಪ್ರಧಾನಿ ತಿಳಿಸಿದರು.

ರಕ್ಷಣಾ ಮತ್ತು ಭದ್ರತಾ ವಲಯಗಳಲ್ಲಿ ಸಹಕಾರ ಎರಡೂ ದೇಶಗಳ ನಡುವಿನ ಸಂಬಂಧವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ಸಹಾಯವಾಗಲಿದೆ ಎಂದು ಮೋದಿ ಹೇಳಿದರು.

ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನ ಇಂದು 14 ಒಪ್ಪಂದಗಳಿಗೆ ಸಹಿ ಹಾಕಿದೆ. ರಕ್ಷಣೆ, ಕಡಲ ಸಾಗಣೆ, ವಿಸ್ತಾರವಾದ ಕಾರ್ಯತಂತ್ರ ಸಹಭಾಗಿತ್ವ, ಹಡಗು, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳು, ವ್ಯಾಪಾರ, ತೈಲ ಸಂಗ್ರಹ ಮತ್ತು ನಿರ್ವಹಣೆ, ಇಂಧನ ದಕ್ಷತೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಮಾನವ ಕಳ್ಳ ಸಾಗಣೆಯನ್ನು ಜಂಟಿಯಾಗಿ ತಡೆಗಟ್ಟುವಿಕೆಗೆ ಸಂಬಂಧಪಟ್ಟಂತೆ ಉಭಯ ದೇಶಗಳ ನಾಯಕರ ಮಧ್ಯೆ ನಡೆದ ನಿಯೋಗ ಮಟ್ಟದ ಮಾತುಕತೆ ನಂತರ ಸಹಿ ಹಾಕಲಾಯಿತು.

Comments are closed.