ಕರಾವಳಿ

ಅಕ್ರಮ ಗಾಂಜಾ ಸಾಗಾಟ : 8 ಕೆಜಿ ಗಾಂಜಾ ಸಹಿತಾ ಹಳೆ ಆರೋಪಿ ಸೆರೆ

Pinterest LinkedIn Tumblr

ganja_accused-arrest

ಮಂಗಳೂರು ನಗರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಬಂಧಿತನಿಂದ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಇಬ್ರಾಹೀಂ, ಪ್ರಾಯ(38) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು ಒಟ್ಟು 8 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಆಂದಾಜು ಮೌಲ್ಯ 2,01,510/- ಆಗಿರುತ್ತದೆ.

ನವೆಂಬರ್ 27ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿಯಿಂದ ಬೃಹತ್ ಪ್ರಮಾಣದಲ್ಲಿ ಮಂಗಳೂರು ನಗರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಪಂಪ್ ವೆಲ್ ವೃತ್ತದ ಬಳಿಯಿರುವ ಹೊಟೇಲ್ ಪದ್ಮಶ್ರೀ ಮುಂಭಾಗದಲ್ಲಿ ಕಾದುಕುಳಿತು ಆರೋಪಿ ಪುತ್ತೂರು/ಸುಳ್ಯ ಕಡೆಗೆ ಗಾಂಜಾ ಮಾರಾಟ ಮಾಡಲು ತೆರಳುವ ಸಂದರ್ಭದಲ್ಲಿ ಬಂಧಿಸಿ, ಬಂಧಿತನಿಂದ ಗಾಂಜಾ ಸಹಿತಾ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಗಾಂಜಾವನ್ನು ಆರೋಪಿಯು ವಿಶಾಖಪಟ್ಟಣದಿಂದ ಖರೀದಿ ಮಾಡಿ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮಾರಾಟ ಮಾಡಲು ತಂದಿರುವುದಾಗಿದೆ. ಈತನು ಹಿಂದೆ 2014 ನೇ ಇಸವಿಯಲ್ಲಿ ಈತನು ಇದೇ ರೀತಿಯಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಮಯ ಈತನನ್ನು ದಸ್ತಗಿರಿ ಮಾಡಲಾಗಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದನು. ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಹೊರಡಿಸಿರುತ್ತದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Comments are closed.