ಕರ್ನಾಟಕ

ಮಳೆಗಾಗಿ ಗಂಡು ಮಕ್ಕಳಿಗೆ ಮದುವೆ!

Pinterest LinkedIn Tumblr

vijaya26ವಿಜಯಪುರ: ತೀವ್ರ ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಬಯಲು ಸೀಮೆ ಭಾಗದಲ್ಲಿನ ಜನರು, ಹಳ್ಳಿಗಳಲ್ಲಿ ಸಂಪ್ರದಾಯಬದ್ಧವಾಗಿ ಮಳೆಗಾಗಿ ಆಚರಣೆ ಮಾಡುವ ಗೌರಮ್ಮನ ರಂಗೋಲಿಯೆಂಬ ಜಾನಪದ ರೂಪದ ಆಚರಣೆಯನ್ನೂ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಪಿ.ರಂಗನಾಥಪುರ ಗ್ರಾಮದಲ್ಲಿ ಐದು ದಿನಗಳಿಂದ ಗ್ರಾಮದ ಮಹಿಳೆಯರು ಗೌರಮ್ಮನ ರಂಗೋಲಿ ಬಿಡಿಸಿ, ಮಳೆ ಅನುಗ್ರಹಿಸುವಂತೆ ಜನಪದ ಹಾಡುಗಳ ಮೂಲಕ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ.

ಐದನೇ ದಿನ ರಂಗೋಲಿ ಬಿಡಿಸುವ ಜಾಗದಲ್ಲಿ ಚಪ್ಪರ ಹಾಕಿ ವಿದ್ಯುತ್ ದೀಪಾಲಂಕಾರ ಮಾಡುತ್ತಾರೆ. ಗ್ರಾಮದ ಮುತ್ತೈದೆಯರು ಇಬ್ಬರು ಗಂಡು ಮಕ್ಕಳನ್ನು ನಿಗದಿ ಪಡಿಸಿ ಒಬ್ಬರನ್ನು ವಧುವಿನಂತೆ ಸಿಂಗಾರ ಮಾಡುತ್ತಾರೆ. ಮತ್ತೊಬ್ಬ ಹುಡುಗನನ್ನು ವರನಂತೆ ಸಿಂಗರಿಸಿ, ವಿಜೃಂಭಣೆಯಿಂದ ಮದುವೆ ಶಾಸ್ತ್ರವನ್ನು ನೆರವೇರಿಸುತ್ತಾರೆ.

ಮದುವೆ ಶಾಸ್ತ್ರ ನಂತರ ವಿವಿಧ ಬಗೆ ಸಿಹಿತಿಂಡಿಗಳು, ಹಣ್ಣು, ಎಲೆಅಡಿಕೆ ಮುಂತಾದ ಪದಾರ್ಥಗಳನ್ನು ಜೋಡಿಸಿ ಉಡುಗೊರೆ ಹಾಕುತ್ತಾರೆ.
ಮದುವೆ ಶಾಸ್ತ್ರವನ್ನು ನೆರವೇರಿಸಿದ ನಂತರ ರಂಗೋಲಿಯ ಮಧ್ಯದಲ್ಲಿ ಸ್ಥಾಪಿಸಿದ ಕಲಶವನ್ನು ಹೊತ್ತುಕೊಂಡು ಹೋಗುವ ನೂತನ ವಧುವರರಂತೆ ಸಿಂಗಾರಗೊಂಡಿರುವ ಮಕ್ಕಳು ಹಾಗೂ ಗ್ರಾಮಸ್ಥರು ಸಮೀಪದ ಕೆರೆ, ಅಥವಾ ಕುಂಟೆಯಲ್ಲಿ ಕಲಶ ಇಟ್ಟು ಪೂಜೆ ಸಲ್ಲಿಸಿ ಹಿಂತಿರುಗುತ್ತಾರೆ.

ಹೆಣ್ಣು ಮಕ್ಕಳೆಲ್ಲಾ ಒಟ್ಟುಗೂಡಿ ಜನಪದ ಹಾಡು ಹಾಡಿ ರಂಗೋಲಿ ಒರೆಸುವ ಪದ್ಧತಿಯನ್ನು ಮಳೆಯ ಅಭಾವ ಕಾಡಿದಾಗಲೆಲ್ಲಾ ಮಾಡಿಕೊಂಡು ಬರುತ್ತಿದ್ದಾರೆ.

ಗ್ರಾಮದ ಮದನ್ ಮತ್ತು ನಂದನ್ ವಧು-ವರರ ಪಾತ್ರ ನಿರ್ವಹಿಸಿದ್ದರು. ಗೌರಮ್ಮ, ಲಕ್ಷ್ಮಮ್ಮ, ಸಾಲೆಮ್ಮ, ಚಿಕ್ಕಮುನಿಯಮ್ಮ, ನಾರಾಯಣಮ್ಮ, ಗಾಯಿತ್ರಿ, ರತ್ನಮ್ಮ, ದ್ಯಾವಮ್ಮ, ಮುನಿಯಮ್ಮ, ನಂದಿನಿ, ಅನುಷಾ, ಡ್ರೈವರ್ ಮುನಿಶಾಮಪ್ಪ, ಪಿ.ವಿ.ವಿಜಯ್, ಚಂದ್ರಶೇಖರ್, ಹೆಚ್.ವಿ.ರಮೇಶ್, ನಾಗರಾಜ್, ಇನ್ನಿತರರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.