ಕರ್ನಾಟಕ

ಪ್ರಜಾವಾಣಿಯ ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್ ನಿಧನ

Pinterest LinkedIn Tumblr

m-b-singhಬೆಂಗಳೂರು: ‘ಪ್ರಜಾವಾಣಿ’, ‘ಸುಧಾ’ ಹಾಗೂ ‘ಮಯೂರ’ ಪತ್ರಿಕೆಗಳ ಸಂಪಾದಕರಾಗಿದ್ದ ಎಂ.ಬಿ. ಸಿಂಗ್ (91) ಅವರು ಮಂಗಳವಾರ ರಾತ್ರಿ ಸಹಕಾರನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

1925ರ ಮೇ 24ರಂದು ಮೈಸೂರಿನಲ್ಲಿ ಜನಿಸಿದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ‘ಮಾತೃಭೂಮಿ’ ಪತ್ರಿಕೆಯ ಮೈಸೂರು ವರದಿಗಾರ ಹಾಗೂ ಏಜೆಂಟರಾಗಿ ಕಾರ್ಯನಿರ್ವಹಿಸಿದರು. ನಂತರ ‘ವಾರ್ತಾ’, ‘ಚಿತ್ರಗುಪ್ತ’ ಹಾಗೂ ‘ವಿಶ್ವ ಕರ್ನಾಟಕ’ ಪತ್ರಿಕೆಗಳಲ್ಲಿ ಕೆಲ ವರ್ಷ ದುಡಿದ ಅವರು, 1953ರಲ್ಲಿ ‘ಪ್ರಜಾವಾಣಿ’ ಬಳಗ ಸೇರಿದರು.

ಉಪ ಸಂಪಾದಕ ಮತ್ತು ವರದಿಗಾರರಾಗಿ ‘ಪ್ರಜಾವಾಣಿ’ಯಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು, ನಂತರ ಅದೇ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾದರು. ಸಿಂಗ್ ಅವರ ಮಾಧ್ಯಮಕ್ಷೇತ್ರದ ಸೇವೆಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’, ‘ಖಾದ್ರಿ ಶಾಮಣ್ಣ ಪ್ರಶಸ್ತಿ’ ಹಾಗೂ ‘ಟೀಯೆಸ್ಸಾರ್ ಪ್ರಶಸ್ತಿ’ಗಳು ಸಂದಿವೆ. 90 ವರ್ಷಕ್ಕೆ ಕಾಲಿಟ್ಟಿದ್ದ ಅವರನ್ನು ಕಳೆದ ವರ್ಷ ಅಭಿನಂದಿಸಿ, ‘ಎಂ.ಬಿ. ಸಿಂಗ್ : ಕನ್ನಡ ಪತ್ರಿಕೋದ್ಯಮದ ಕಟ್ಟಾಳು’ ಎಂಬ ಕೃತಿಯನ್ನು ಕೂಡ ಹೊರತರಲಾಗಿತ್ತು.

ಸಿಂಗ್ ಅವರ ಮೃತದೇಹವನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ.

Comments are closed.