ರಾಷ್ಟ್ರೀಯ

ಪೂಜಿಸುವ ದೇವಿಗೂ ಋತುಸ್ರಾವ ಆಚರಿಸುವ ಆಚರಣೆಯೇ “ಅಂಬಾಬುಚಿ ಮೇಳ”

Pinterest LinkedIn Tumblr

kamakhya_temple_1

ಮಂಗಳೂರು: ಮಹಿಳೆಯರು ಋತುಚಕ್ರವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಆದರೆ ಪರಮ ಪೂಜ್ಯವಾಗಿ ಪೂಜಿಸುವ ದೇವಿಯ ಋತುಸ್ರಾವ ಆಚರಣೆಯನ್ನು ಆಚರಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಇದು ಸತ್ಯ. ಈ ಒಂದು ಆಚರಣೆಯನ್ನು “ಅಂಬಾಬುಚಿ ಮೇಳ” ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಇದು ಅಸ್ಸಾಂ ರಾಜ್ಯದ ಅತಿ ದೊಡ್ಡ ಊರಾದ ಗುವಾಹಾಟಿಯ ಪ್ರಖ್ಯಾತ ಕಾಮಾಖ್ಯ ದೇವಿಯ ದೇವಾಲಯದಲ್ಲಿ ಆಚರಿಸಲ್ಪಡುತ್ತದೆ.

ಗುವಾಹಾಟಿ ನಗರದಲ್ಲಿ ಸ್ಥಿತವಿರುವ ಕಾಮಾಖ್ಯ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಹಿಂದೂ ಧರ್ಮದವರು ಅದರಲ್ಲೂ ಪ್ರಮುಖವಾಗಿ ತಂತ್ರ ವಿದ್ಯೆಗಳನ್ನು ಆಚರಿಸುವವರು ನಡೆದುಕೊಳ್ಳುತ್ತಾರೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಹಿಂದೆ ಈ ದೇವಾಲಯ ಬಲಿಯನ್ನು ಕೊಡಲಾಗುವ ತಾಣವಾಗಿತ್ತೆನ್ನಲಾಗಿದೆ. ನಗರದಲ್ಲಿರುವ ಪ್ರಮುಖ ದೇವಾಲಯ ಸಂಕೀರ್ಣದಲ್ಲಿ ಈ ಕಾಮಾಖ್ಯ ದೇವಾಲಯವು ಅತಿ ಪ್ರಮುಖವಾಗಿದ್ದು ಇತರೆ ದಶ ಮಹಾವಿದ್ಯೆಯರಾದ ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರಸುಂದರಿ, ತಾರಾ, ಕಾಳಿ, ಭೈರವಿ, ಧುಮವತಿ, ಮಾತಂಗಿ ಹಾಗೂ ಕಮಲಾ ದೇವಿಯರ ದೇವಾಲಯಗಳನ್ನೂ ಸಹ ಕಾಣಬಹುದು.

ಕಾಮಾಖ್ಯ ದೇವಿಯು ವರ್ಷದ ಈ ನಿರ್ದಿಷ್ಟ ಸಮಯದಲ್ಲಿ ಋತುಚಕ್ರವನ್ನು ಅನುಭವಿಸುತ್ತಾಳೆ ಎಂದು ನಂಬಲಾಗಿದೆ. ಅಲ್ಲದೆ ಮುಟ್ಟಿನ ಈ ಸಮಯದಲ್ಲಿ ದೇವಿಯ ಶಕ್ತಿಯು ಅಪಾರವಾಗಿ ಕ್ರೋಢಿಕರಣಗೊಳ್ಳುತ್ತದೆ ಹಾಗೂ ಶೃದ್ಧೆ ಭಕ್ತಿಯಿಂದ ದೇವಿಯನ್ನು ಪೂಜಿಸುವವರಿಗೆ ನಿರಾಯಾಸವಾಗಿ ದೇವಿಯ ಕೃಪೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

kamakhya_temple_2

ಸಾಮಾನ್ಯವಾಗಿ ದೇವಿಗೆ ಪುಷ್ಪಾದಿ ದ್ರವ್ಯಗಳಿಂದ ಪೂಜಿಸಲಾಗುವುದಾದರೂ ಅಲ್ಲಲ್ಲಿ ಕುರಿಗಳ ಬಲಿ ಕೊಡುವಿಕೆಯು ಸಾಮನ್ಯವಾಗಿರುತ್ತದೆ. ಆದರೆ ಪ್ರಾಣಿ ಬಲಿ ಸಂದರ್ಭದಲ್ಲಿ ನಿಯಮದ ಪ್ರಕಾರ ಹೆಣ್ಣು ಪ್ರಾಣಿಗಳ ಬಲಿ ಕೊಡಲಾಗುವುದಿಲ್ಲವಾದರೂ ಸಾಮೂಹಿಕ ಬಲಿ ಸಂದರ್ಭದಲ್ಲಿ ಈ ನಿಯಮವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಕುತೂಹಲಕರ ಸಂಗತಿ ಎಂದರೆ ಈ ದೇವಾಲಯದಲ್ಲಿ ದೇವಿಯ ವಿಗ್ರಹವಿಲ್ಲ ಬದಲಾಗಿ “ಯೋನಿ” ಆಕಾರದ ಒಂದು ಕಲ್ಲಿನ ರಚನೆಯಿದ್ದು ಅದರ ಮೇಲೆ ನೈಸರ್ಗಿಕವಾಗಿ ಉದ್ಭವವಾಗಿರುವಂತಹ ನೀರಿನ ಚಿಲುಮೆಯೊಂದು ಹರಿಯುವುದನ್ನು ಕಾಣಬಹುದು.

kamakhya_temple_3

ಕಲಿಕಾ ಪುರಾಣದ ಪ್ರಕಾರ, ಈ ದೇವಾಲಯವು ಶಿವನು ಸತಿಯ ಪ್ರಾಣ ತ್ಯಾಗದ ನಂತರ ಆಕೆಯ ದೇಹವನ್ನು ಎತ್ತಿಕೊಂಡು ಅಸಮಾಧಾನದಿಂದ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಯೋನಿ ಭಾಗವು ಬಿದ್ದಿದ್ದ ಸ್ಥಳವನ್ನು ಸೂಚಿಸುತ್ತದೆ. ದೇವಿ ಭಾಗವತದಲ್ಲಿ ಉಲ್ಲೇಖಿಸಲಾದ 108 ಶಕ್ತಿ ಪೀಠಗಳಲ್ಲಿ ಸತಿಯ ಈ ದೇಹದ ಭಾಗದ ಕುರಿತು ದಾಖಲಾಗಿಲ್ಲವಾದರೂ ನಂತರದ ಅನುಬಂಧಗಳಲ್ಲಿ ಕಮಾಖ್ಯ ದೇವಿಯ ಕುರಿತು ಉಲ್ಲೇಖಿಸಲಾಗಿದೆ.

kamakhya_temple_4

ಗುವಾಹಾಟಿಯನ್ನು ವಿಮಾನ, ರೈಲು ಹಾಗೂ ಬಸ್ಸುಗಳ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಲೋಕಪ್ರಿಯ ಗೋಪಿನಾಥ ಬೊರ್ಡೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ 20 ಕಿ.ಮೀ ದೂರವಿದ್ದು ಭಾರತದ ಮಹಾನಗರಗಳೊಂದಿಗೆ ಸಂಪರ್ಕ ಹೊಂದಿದೆ. ಭಾರತದ ಪ್ರಮುಖ ಪಟ್ಟಣಗಳಿಂದ ಗುವಾಹಾಟಿಗೆ ರೈಲು ಸಂಪರ್ಕ ದೊರೆಯುತ್ತದೆ. ಇನ್ನೂ ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31 ಗುವಾಹಾಟಿಯೊಂದಿಗೆ ಸಂಪರ್ಕ ಬೆಸೆಯುತ್ತದೆ.

Comments are closed.