ಅಂತರಾಷ್ಟ್ರೀಯ

ಮತ್ತೆ ತಗಾದೆ ತೆಗೆದ ಚೀನಾ; ಬ್ರಹ್ಮಪುತ್ರ ಉಪನದಿ ತಡೆ ಹಿಡಿದ ಚೀನಾ

Pinterest LinkedIn Tumblr

brahmaputra1

ಬೀಜಿಂಗ್: ಚೀನಾ ಟಿಬೆಟ್ ನಲ್ಲಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಜಲಾಶಯ ಕಾಮಗಾರಿಗಾಗಿ ಬ್ರಹ್ಮಪುತ್ರ ನದಿಯ ಉಪನದಿಗಳನ್ನು ತಡೆಹಿಡಿದಿದ್ದು ಈ ಮೂಲಕ ಪರೋಕ್ಷವಾಗಿ ಭಾರತದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಉರಿ ಸೇನಾ ಶಿಬಿರದ ಮೇಲಿನ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಮಾಡಿಕೊಂಡಿದ್ದ ಸಿಂಧು ನದಿ ನೀರಿನ ಒಪ್ಪಂದದ ಕುರಿತು ಮರು ಚಿಂತಿಸುವುದಾಗಿ ಭಾರತ ತಿಳಿಸಿತ್ತು. ಈ ನಡುವೆ ಚೀನಾ ಇಂತಹ ಕ್ರಮಕೈಗೊಂಡಿದೆ.

ಸುಮಾರು 740 ಮಿಲಿಯನ್ ಡಾಲರ್ ವೆಚ್ಚದಲ್ಲಿ ಟಿಬೆಟ್ ನ ಕ್ಸಿಗಜೆ ಎಂಬಲ್ಲಿ ಚೀನಾ ಅಣೆಕಟ್ಟು ನಿರ್ಮಾಣ ಕಾರ್ಯವನ್ನು 2014ರ ಜೂನ್ ನಲ್ಲಿ ಪ್ರಾರಂಭಿಸಿತ್ತು. 2019ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿರುವ ಚೀನಾ ಪ್ರಸ್ತುತ ಅಣೆಕಟ್ಟು ನಿರ್ಮಾಣ ಕಾರ್ಯಕ್ಕಾಗಿ ಬ್ರಹ್ಮಪುತ್ರಾ ನದಿಯ ಉಪನದಿ ಕ್ಸಿಬುಕು ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸುತ್ತಿದೆ. ಕ್ಸಿಗಜೆ ಸಿಕ್ಕಿಂಗೆ ಸಮೀಪದಲ್ಲಿದ್ದು ಇಲ್ಲಿಂದ ಬ್ರಹ್ಮಪುತ್ರ ನದಿ ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸುತ್ತದೆ.

ಟಿಬೆಟ್ ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟನ್ನು ನಿರ್ಮಿಸಲು ಮುಂದಾಗಿದ್ದ ಚೀನಾ ಕಾರ್ಯದ ಬಗ್ಗೆ ಭಾರತ ಚಿಂತಿಸುವಂತಾಗಿತ್ತು. ಈ ವೇಳೆ ಚೀನಾ ಭಾರತಕ್ಕೆ ನೀರು ಹರಿಸುವ ಸಂಬಂಧ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ನಾವು ಕೇವಲ ವಿದ್ಯುತ್ ಉತ್ಪಾದನೆ ಮಾಡುತ್ತೇವೆ. ನೀರನ್ನು ತಡೆ ಹಿಡಿಯುವ ಉದ್ದೇಶ ನಮಗಿಲ್ಲ ಎಂದು ಹೇಳಿತ್ತು.

ಬ್ರಹ್ಮಪುತ್ರ ನದಿಯ ಉಪನದಿಗೆ ತಡೆಯೊಡ್ಡಿದ್ದು ಇದರಿಂದಾಗಿ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ಲಭ್ಯವಿಲ್ಲ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.

Comments are closed.