
ಬೆಂಗಳೂರು, ಸೆ. ೨೨- ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದೆಂದು ಆಗ್ರಹಿಸಿ ಬೆಂಗಳೂರಿನಿಂದ ಕೆಆರ್ಎಸ್ವರೆಗೆ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಇಂದು ಜಾಥಾ ಹೊರಟರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಸೇರಿದ ಚಲನಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಸೇನೆಯ ಕೆ.ಆರ್. ಕುಮಾರ್, ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಗಿರೀಶ್ ಗೌಡ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕಾರುಗಳಲ್ಲಿ ಕೆಆರ್ಎಸ್ನತ್ತ ಜಾಥಾ ಹೊರಟರು.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೇರಿದ ವಾಟಾಳ್ ನಾಗರಾಜ್ ಇನ್ನಿತರ ಮುಖಂಡರನ್ನು ಪೊಲೀಸರು ಬಂಧಿಸಲು ಮುಂದಾದರಾದರೂ ಅಷ್ಟರಲ್ಲಿ ಕಾರುಗಳನ್ನೇರಿ ಜಾಥಾ ಹೊರಟರು.
ಕೆಂಗೇರಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಮಾರ್ಗವಾಗಿ ಜಾಥಾ ಕೆಆರ್ಎಸ್ ತಲುಪಲಿದೆ. ಜಾಥಾವನ್ನು ಕೆಆರ್ಎಸ್ ಬಳಿ ಸಮಾವೇಶಗೊಳಿಸಿ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ಪ್ರತಿಭಟನೆ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಕಾವೇರಿ ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು, ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿರುವಾಗ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಂತೆ ಅವರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
Comments are closed.