
ಬೆಂಗಳೂರು,ಸೆ.೨೨-ನಿದ್ದೆಗೆ ಜಾರಿದ ಚಾಲಕ ಕಾರನ್ನು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ದುರ್ಘಟನೆ ಇಂದು ಬೆಳಿಗ್ಗೆ ನೈಸ್ ರಸ್ತೆಯ ಸೊಂಪುರದ ಬಳಿ ನಡೆದಿದೆ.
ಬನಶಂಕರಿಯ ಶಿವಕುಮಾರ್(೨೮)ಅವರ ಅಕ್ಕ ಭಾಗೀರಥಿ(೩೫)ಮೃತಪಟ್ಟವರು,ಶಿವಕುಮಾರ್ ತಂದೆ ರಾಮಚಂದ್ರ ತಾಯಿ ಬಸಮ್ಮ ಭಾಗೀರಥಿ ಅವರ ಮಕ್ಕಳಾದ ಭರತ್ ಹಾಗೂ ಬಿಂದುಶ್ರೀ ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ರಾಮಚಂದ್ರ ಅವರ ಸ್ಥಿತಿ ಚಿಂತಾಜನಕವಾಗಿದ್ದು ಆರ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಳಿದೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುಲ್ಬರ್ಗ ಮೂಲದ ಇವರೆಲ್ಲೂ ತಾತನ ವರ್ಷದ ತಿಥಿ ಕಾರ್ಯಕ್ಕೆ ಗುಲ್ಬರ್ಗಕ್ಕೆ ಹೋಗಿ ನಿನ್ನೆ ಸಂಜೆ ಬನಶಂಕರಿಗೆ ಹೊರಟಿದ್ದರು ಶಿವಕುಮಾರ್ ಸಂಜೆಯಿಂದ ರಾತ್ರಿಯಿಡಿ ಮಾರುತಿ ೮೦೦ ಕಾರು ಚಲಾಯಿಸಿದ್ದು ಬೆಳಿಗ್ಗೆ ೬ರ ವೇಳೆ ನೈಸ್ ರಸ್ತೆಯ ಸೊಂಪುರದ ಸೇತುವೆ ಬಳಿ ನಿದ್ದೆಗೆ ಜಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಶಿವಕುಮಾರ್ ಹಾಗೂ ಭಾಗೀರಥಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಉಳಿದವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಡಿಸಿಪಿ ಶರಣಪ್ಪ ಅವರು ತಿಳಿಸಿದ್ದಾರೆ.
Comments are closed.