
ಬೆಂಗಳೂರು, ಸೆ. ೨೦- ಇತ್ತೀಚಿನ ದಿನಗಳಲ್ಲಿ ಲೆಟರ್ಹೆಡ್ ಬಳಸಿಕೊಳ್ಳುವುದು ದಂಧೆಯಾಗುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದು ಇಲ್ಲಿ ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹಲವಾರು ನಾಯಕರ ಹೆಸರಲ್ಲಿ ಲೆಟರ್ಹೆಡ್ಗಳನ್ನು ಮಾಡಿಕೊಂಡು ಹಣ ವಸೂಲಿಗೆ ಇಳಿದಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಗೊಳ್ಳಿ ರಾಯಣ್ಣ ಹೆಸರನ್ನು ಯಾರು ಬಳಸಿಕೊಳ್ಳಬಾರದು ಎಂದು ನಿರ್ಬಂಧ ಹೇರಿಲ್ಲ. ಈಶ್ವರಪ್ಪ ಬಳಸಿಕೊಳ್ಳುತ್ತಿದ್ದಾರೆ ಬಳಸಿಕೊಳ್ಳಲಿ. ಬೇಕಿದ್ದರೆ ನೀವೂ ಬಳಸಿಕೊಳ್ಳಿ ಆದರೆ, ಲೆಟರ್ಹೆಡ್ ಬಳಸಿಕೊಳ್ಳುವುದಂತೂ ಇತ್ತೀಚೆಗೆ ದಂಧೆಯಾಗಿದೆ ಎಂದರು.
ಮಧ್ಯ ಪ್ರವೇಶಕ್ಕೆ ಆಗ್ರಹ
ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಎಲ್ಲ ಅಧಿಕಾರವಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಅಂತರರಾಜ್ಯ ನದಿ ನೀರು ಕಾಯ್ದೆಯಡಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದು ತಾವು ಹೇಳಿಲ್ಲ. ತಮ್ಮ ಹೇಳಿಕೆಯನ್ನು ಈಶ್ವರಪ್ಪ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ದೂರಿದರು.
28ಕ್ಕೆ ಸಭೆ
ರಾಜ್ಯದ 63ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಛಾಯೆಯಿದೆ. ಈ ತಿಂಗಳ 28 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಹೆಚ್ಚು ತಾಲೂಕುಗಳಲ್ಲಿ ಬರವಿದೆ ಎನ್ನುವುದು ತಿಳಿಯಲಿದೆ ಎಂದು ಹೇಳಿದರು.
Comments are closed.