ಕರ್ನಾಟಕ

ವೈದ್ಯೆಯ ಕೈ–ಕಾಲು ಕಟ್ಟಿ ದರೋಡೆ

Pinterest LinkedIn Tumblr

darode

ಬೆಂಗಳೂರು, ಸೆ. ೨೦ – ಒಂಟಿಯಾಗಿದ್ದ ವೈದ್ಯೆಯೊಬ್ಬರನ್ನು ಅವರ ಮನೆಯ ಅಡುಗೆ ಭಟ್ಟ ಸೇರಿ ಇಬ್ಬರು ಕೈ, ಕಾಲು ಕಟ್ಟಿ ಹಾಕಿ ಬಾಯಿಗೆ ಸೆಲೋ ಟೇಪ್ ಅಂಟಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜಯನಗರದ 8ನೇ ಬ್ಲಾಕ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಜಯನಗರ 8ನೇ ಬ್ಲಾಕ್‌ನ ವೈಷ್ಣವಿ ಬಿಲ್ಡಿಂಗ್‌ನಲ್ಲಿದ್ದ ಪ್ರತಿಭಾ ಜೈನ್ ಅವರನ್ನು ಕೈ – ಕಾಲು ಕಟ್ಟಿ ಹಾಕಿ ಬಾಯಿಗೆ ಸೆಲೋ ಟೇಪ್ ಅಂಟಿಸಿ ಮನೆಯಲ್ಲಿದ್ದ ನಗದೂ ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಜಾರ್ಖಂಡ್ ಮೂಲದ ಅಡುಗೆ ಭಟ್ಟ ದಿನೇಶ್ ಕುಮಾರ್ ಮತ್ತವನ ಸ್ನೇಹಿತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ಹಿಂದೆ ಪ್ರತಿಭಾ ಜೈನ್ ಅವರ ತಂದೆ – ತಾಯಿ ಅಮೆರಿಕಕ್ಕೆ ತೆರಳಿದ್ದು, ವೈದ್ಯಕೀಯ ಪದವಿ ಮುಗಿಸಿದ್ದ ಪ್ರತಿಭಾ ಜೈನ್ ಒಂಟಿಯಾಗಿದ್ದರು. ಅವರ ಮನೆಯಲ್ಲಿದ್ದ ಅಡುಗೆ ಭಟ್ಟ ದಿನೇಶ್ ಕುಮಾರ್‌ ಪ್ರತಿಭಾ ಜೈನ್ ಒಂಟಿಯಾಗಿದ್ದುದ್ದನ್ನು ಗಮನಿಸಿ ಹೊಂಚು ಹಾಕಿ ರಾತ್ರಿ 9.45ರ ವೇಳೆ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದಾನೆ.
ಪರಿಚಯದ ಮೇಲೆ ಮನೆಯೊಳಗೆ ಬಂದ ಅವರಿಬ್ಬರು ಪ್ರತಿಭಾ ಜೈನ್ ಅವರನ್ನು ಬೆದರಿಸಿ ಕೈ, ಕಾಲು ಕಟ್ಟಿ ಹಾಕಿ ಬಾಯಿಗೆ ಸೆಲೋ ಟೇಪ್ ಅಂಟಿಸಿ ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಗದೂ ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಸಾಕಷ್ಟು ಪ್ರಯತ್ನಪಟ್ಟು ಕೆಲ ಸಮಯದ ನಂತರ ಸೆಲೋ ಟೇಪ್ ಕಿತ್ತು ಹಾಕಿಕೊಂಡು ರಕ್ಷಣೆಗಾಗಿ ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದು ಕೈ-ಕಾಲು ಬಿಚ್ಚಿಸಿಕೊಂಡು ಪ್ರತಿಭಾ ಜೈನ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಅಡುಗೆ ಭಟ್ಟನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.

Comments are closed.