ಬೆಂಗಳೂರು, ಸೆ.15-ಒಂದು ಮನೆ ಕಟ್ಟಬೇಕಾದರೂ ತಿಂಗಳುಗಟ್ಟಲೆ ಬಿಲ್ಡಿಂಗ್ ಪ್ಲಾನ್‌ಗಾಗಿ ಕಾಯುವ ಕಾಲಕ್ಕೆ ಕೊನೆಗೂ ವಿದಾಯ ಹೇಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಡೀ ಪ್ರಕ್ರಿಯೆಯನ್ನು ಇಂಜಿಯರ್‌ಗಳಿರುವ ವೃತ್ತಿಪರ ಸಮಿತಿಗೆ ಹೊರ ಗುತ್ತಿಗೆ ನೀಡುವ ಮೂಲಕ ವಾರದೊಳಗೆ ಮನೆಗೆ ಬಿಲ್ಡಿಂಗ್ ಪ್ಲಾನ್ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಮನೆ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರ ಅದರಲ್ಲೂ ಮಧ್ಯಮ ವರ್ಗದವರು ಬೆಚ್ಚಿಬೀಳುವುದು ಸರ್ಕಾರದ ಕೆಂಪು ಪಟ್ಟಿಯ ವಿಳಂಬ ನೀತಿಯಿಂದ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಈ ಕುರಿತು ಗಂಭೀರ ಚಿಂತನೆಯನ್ನು ಕೊನೆಗೂ ನಡೆಸಿರುವ ರಾಜ್ಯ ಸರ್ಕಾರ ಬಿಲ್ಡಿಂಗ್ ಪ್ಲಾನ್‌ನ ಇಡೀ ಪ್ರಕ್ರಿಯೆಯನ್ನು ತಜ್ಞ ಇಂಜಿನಿಯರ್‌ಗಳ ಪ್ಯಾನಲ್‌ಗೆ ಹೊರಗುತ್ತಿಗೆ ನೀಡಲು ನಿರ್ಧರಿಸಿದೆ. 30-40 ನಿವೇಶನದಲ್ಲಿ ಕಟ್ಟಿಕೊಳ್ಳುವ ಮಧ್ಯಮ ವರ್ಗದವರು ಕೂಡ ಬಿಲ್ಡಿಂಗ್ ಪ್ಲಾನ್‌ಗಾಗಿ ಅಲೆದಾಡಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆ ಮತ್ತು ಆನ್‌ಲೈನ್‌ನಲ್ಲಿ ಸ್ಯಾಂಕ್ಷನ್ ಪ್ಲಾನ್ ಮಾಡುವ ಪ್ರಸ್ತಾಪವನ್ನು ಪರಿಶೀಲನೆ ನಡೆಸಿದೆ.
ಏಕಗವಾಕ್ಷಿ ವ್ಯವಸ್ಥೆ:
ಗಗನಚುಂಬಿ ಮತ್ತು ವಾಣಿಜ್ಯ ಕಟ್ಟಡಗಳಿಗೂ ಸ್ಯಾಂಕ್ಷನ್ ಪ್ಲಾನ್ ಮತ್ತು ಆಕ್ಯುಪೆನ್ಸಿ ಸರ್ಟಿಫೀಕೆಟ್ ನೀಡುವ ಪ್ರಕ್ರಿಯೆಯನ್ನೂ ಸರಳಗೊಳಿಸಲು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅಪಾರ್ಟ್‌ಮೆಂಟ್ ಸೇರಿದಂತೆ ಎಲ್ಲಾ ಕಟ್ಟಡಗಳ ಸ್ಯಾಂಕ್ಷನ್ ಪ್ಲಾನ್ ಮತ್ತು ಆಕ್ಯುಪೆನ್ಸಿ ಸರ್ಟಿಫೀಕೆಟ್ ನೀಡಲು ಯೋಜನೆ ರೂಪಿಸುತ್ತಿದೆ. ಎಲ್ಲಾ ರೀತಿಯ ಕಟ್ಟಡಗಳಿಗೂ ಆನ್‌ಲೈನ್ ದಾಖಲೆ ಸಲ್ಲಿಕೆ ಕಡ್ಡಾಯಗೊಳಿಸಬೇಕು. ದಾಖಲೆ ಪರಿಶೀಲನೆಯೇ ವಿಳಂಬಕ್ಕೆ ಕಾರಣವಾಗುವುದನ್ನು ತಪ್ಪಿಸಬೇಕು. ಇದರಿಂದ ಸಾಲದ ಮೇಲಿನ ಬಡ್ಡಿಯ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿ ಆ ಮೂಲಕ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ ಎಂದು ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಅಭಿಪ್ರಾಯಪಟ್ಟಿದ್ದಾರೆ. ಅನುಮೋದನೆ ವಿಳಂಬದಿಂದ ಮನೆ ಖರೀದಿ ಅಥವಾ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಅನುಮೋದನೆಗಳನ್ನು ಶೀಘ್ರ ನೀಡುವ ನಿಟ್ಟಿನಲ್ಲಿ ಸರ್ಕಾರದ ಈ ತೀರ್ಮಾನ ಖಚಿತವಾಗಿಯೂ ಮಧ್ಯಮ ವರ್ಗದವರಿಗೆ ಪರೋಕ್ಷವಾಗಿ ನೆರವು ನೀಡಲಿದೆ ಎಂದು ಬ್ರಿಗೇಡ್ ಗ್ರೂಪ್‌ನ ಸಿಇಒ ಓಂ ಅಹುಜಾ ಹೇಳಿದ್ದಾರೆ.
Comments are closed.