ಕರ್ನಾಟಕ

ಕೆಆರ್‌ಎಸ್‌ ವಾತಾವರಣ ಶಾಂತ: ಜಲಾಶಯದ ಪ್ರವೇಶದ್ವಾರಗಳಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜನೆ

Pinterest LinkedIn Tumblr

myಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಉದ್ರಿಕ್ತವಾಗಿದ್ದ ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯ ಹಾಗೂ ಬೃಂದಾವನ ಉದ್ಯಾನದ ಸುತ್ತಮುತ್ತಲಿನ ವಾತಾವರಣ ಸಹಜಸ್ಥಿತಿಗೆ ಮರಳಿದ್ದು, ಮಂಗಳವಾರ ಶಾಂತ ವಾತಾವರಣ ನೆಲೆಸಿತ್ತು.

ಕೆಲ ದಿನಗಳ ಹಿಂದೆ ಜೋರು ಪ್ರತಿಭಟನೆ ನಡೆದಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಪ್ರವೇಶದ್ವಾರಗಳಲ್ಲಿ ಸುಮಾರು 839 ಪೊಲೀಸ್‌ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಈ ಭಾಗದಲ್ಲಿ ಜನ ಹಾಗೂ ವಾಹನ ಸಂಚಾರ ಕೂಡ ತೀರ ಕಡಿಮೆ ಇತ್ತು. ಬೃಂದಾವನ ಉದ್ಯಾನ ಪ್ರವೇಶಕ್ಕೆ ನಿಷೇಧ ಹೇರಿರುವುದರಿಂದ ಪ್ರವಾಸಿಗಳು ಇತ್ತ ಸುಳಿಯುತ್ತಿಲ್ಲ.

ಜಲಾಶಯದ ಮುಂದಿನ ದ್ವಾರ ಹಾಗೂ ಸೇತುವೆ ಬಳಿಯ ದ್ವಾರಗಳಿಗೆ ಬೀಗ ಹಾಕಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಸಿಬ್ಬಂದಿ ಬಂದೂಕು ಹಿಡಿದು ಕಾವಲು ಕಾಯುತ್ತಿದ್ದಾರೆ. ಸುತ್ತಮುತ್ತಲಿನ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ.

ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್), ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ತುಕಡಿಯನ್ನು ನಿಯೋಜಿಸಲಾಗಿದೆ. ಐಜಿ, ಮೂವರು ಎಸ್ಪಿ, ಮೂವರು ಡಿವೈಎಸ್ಪಿ, ಆರು ಇನ್‌ಸ್ಪೆಕ್ಟರ್‌ ಇದ್ದಾರೆ. ಗಲಭೆ ನಿಯಂತ್ರಣ ವಾಹನ, ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್‌ಗಳು ಬೀಡುಬಿಟ್ಟಿವೆ.

‘ಪರಿಸ್ಥಿತಿ ಪೂರ್ಣ ಹತೋಟಿ ಯಲ್ಲಿದ್ದು, ಶಾಂತಿಯುತ ವಾತಾವರಣ ನೆಲೆಸಿದೆ. ಪ್ರತಿಭಟನಾಕಾರರು ಇತ್ತ ಸುಳಿದಿಲ್ಲ’ ಎಂದು ಡಿವೈಎಸ್ಪಿ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಭಾಗದಲ್ಲಿ ಕೆಲ ದಿನಗಳ ಹಿಂದೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದ ಟೈರು ಹಾಗೂ ಮರದ ದಿಮ್ಮಿಗಳು ಇನ್ನೂ ಹೊಗೆಯಾಡುತ್ತಿವೆ.
ವಹಿವಾಟಿಗೆ ಅಡ್ಡಿ: ವಾತಾವರಣ ಶಾಂತ ಸ್ಥಿತಿಗೆ ಮರಳಿದ್ದರೂ ಮೈಸೂರು–ಬೆಂಗಳೂರು ಮಾರ್ಗದ ಬಹುತೇಕ ಅಂಗಡಿ, ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳು ಬಾಗಿಲು ತೆರೆದಿರಲಿಲ್ಲ.

ಬೃಂದಾವನ ಉದ್ಯಾನ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಈ ಭಾಗದ ಹೋಟೆಲ್‌ಗಳ ವಹಿವಾಟು ಕುಸಿದಿದೆ. ಬೀದಿಬದಿ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ.

‘ನಮ್ಮ ಹೋಟೆಲಿನಲ್ಲಿ ನಿತ್ಯ ₹ 4ರಿಂದ 5 ಸಾವಿರ ವಹಿವಾಟು ನಡೆಯುತ್ತದೆ. ಆದರೆ, ಉದ್ಯಾನ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಪ್ರವಾಸಿಗಳು ಇತ್ತ ಸುಳಿಯುತ್ತಿಲ್ಲ. ಹೀಗಾಗಿ, ಕೇವಲ ₹ 1,000 ವಹಿವಾಟು ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಸಿದ್ದಪ್ಪ.

Comments are closed.