ಅಂತರಾಷ್ಟ್ರೀಯ

ಸರ್ಕಾರಿ ಕೆಲಸದಲ್ಲಿದ್ದು ಸೂಪರ್ ಸ್ಟಾರ್ ಪಟ್ಟಕ್ಕೇರಿದ ರಜನಿಕಾಂತ್ ಒಬ್ಬರೇ ಅಲ್ಲ…ಅವರಂತೆ ಕೆಲಸಕ್ಕೆ ತಿಲಾಂಜಲಿ ಹೇಳಿ ಸ್ಟಾರ್ ಆದವರು ಇಲ್ಲಿದ್ದಾರೆ ನೋಡಿ…

Pinterest LinkedIn Tumblr

rajanikanth

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್‌ಒಂದು ಕಾಲದಲ್ಲಿ ಅವರ ಜೇಬಿನಲ್ಲಿದ್ದಿದ್ದು ಕೇವಲ ನಾಲ್ಕಾಣೆ, ಎಂಟಾಣೆಯಂಥ ಚಿಲ್ಲರೆಗಳು. ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್‌ನಲ್ಲಿ ಬಸ್ ಕಂಡಕ್ಟರ್ ಆಗಿ ಸರ್ಕಾರಿ ಜವಾನರಾಗಿದ್ದ ರಜನಿ ಆಗಲೇ ಸ್ಟೈಲಿಷ್ ಕನ್ನಡಕ ಧರಿಸಿ, ಬೀಡಿಯನ್ನೂ ವಿಭಿನ್ನವಾಗಿ ಮೇಲಕ್ಕೆ ಹಾರಿಸುತ್ತಾ ಶಿಳ್ಳೆ ಗಿಟ್ಟಿಸಿಕೊಂಡವರು. ಬಿಡುವು ಸಿಕ್ಕಾಗಲೆಲ್ಲ ನಾಟಕಕ್ಕೆ ಬಣ್ಣ ಹಚ್ಚಿದ ಶಿವಾಜಿರಾವ್ ಗಾಯಕ್‌ವಾಡ್ ಚೆನ್ನೈಗೆ ಹೋಗಿ ‘ಅಪೂರ್ವ ರಾಗಂಗಳ್’ನಲ್ಲಿ ನಟಿಸಿ, ಸಿನಿರಂಗದಲ್ಲಿ ಕ್ರಮೇಣ ಸ್ಟಾರ್ ಆಗಿ ಹೊರಹೊಮ್ಮಿದ್ದು ಇಂದು ನಮ್ಮ ಕಣ್ಮುಂದಿನ ನಂಬಲಾಗದ ಸತ್ಯ. ಸರ್ಕಾರಿ ಕೆಲಸದಲ್ಲೇ ಇರುತ್ತಿದ್ದರೆ, ರಜನಿ ಇಂದು ರಿಟೈರ್ ಆಗಿ ಕೇವಲ ಪೆನ್ಷನ್ ಪಡೆಯುತ್ತಿದ್ದರೇನೋ. ಆದರೆ, ಅವರ ಸಿನಿಮಾಗಳು ಈಗ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ದುಡಿಯುತ್ತಿವೆ. ರಜನಿ ಅವರಂತೆಯೇ ಸರ್ಕಾರಿ ಕೆಲಸಕ್ಕೆ ತಿಲಾಂಜಲಿ ಹೇಳಿ, ಸ್ಟಾರ್ ಆದವರು ಹಲವರಿದ್ದಾರೆ.

ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ರಾಜ್‌ಕುಮಾರ್

raj kumar

50- 80ರ ದಶಕದಲ್ಲಿ ಹಿಂದಿಯಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟ ರಾಜ್‌ಕುಮಾರ್ ಆ ಕಾಲಕ್ಕೆ ಮೇರುತಾರೆ. 1940ರ ಮಟ್ಟಿಗೆ ಐಎಎಸ್ ಪಾಸ್ ಆಗುವುದೇ ಜೀವಮಾನದ ಸಾಧನೆ. ಆ ಪದವಿ ಗಿಟ್ಟಿಸಿಕೊಂಡ ರಾಜ್‌ಕುಮಾರ್‌ಗೆ ಮುಂಬೈ ಪೊಲೀಸ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಪೋಸ್ಟ್ ಸಿಕ್ಕಿತ್ತು. ಖಾಕಿ ಹೊದ್ದು ಕ್ರಿಮಿನಲ್‌ಗಳನ್ನು ಹೊಸಕಿ ಹಾಕಿದ್ದು ಸಾಕಾಗಿ, ‘ರಂಗೀಲಿ’ ಚಿತ್ರದ ಮೂಲಕ ಹಿಂದಿಚಿತ್ರರಂಗಕ್ಕೆ ಕಾಲಿಟ್ಟರು. ಇವರು ನಟಿಸಿದ ‘ಮದರ್ ಇಂಡಿಯಾ’ ಆಸ್ಕರ್ ಹೊಸ್ತಿಲು ದಾಟಿತ್ತು. ನಟಿಸಿದ್ದು 70 ಸಿನಿಮಾಗಳೇ ಆದರೂ ಅವುಗಳಲ್ಲಿ ಬಹುತೇಕ ಎವರ್‌ಗ್ರೀನ್. ಸಬ್‌ಇನ್ಸ್‌ಪೆಕ್ಟರ್ ಆಗಿರುತ್ತಿದ್ದರೆ ರಾಜ್‌ಕುಮಾರ್ ನಮಗ್ಯಾರಿಗೂ ಪರಿಚಯವೇ ಇರುತ್ತಿರಲಿಲ್ಲ.

ಟಿಟಿಇ ಆಗಿದ್ದ ಮಹೇಂದ್ರಸಿಂಗ್ ಧೋನಿ

dhoni

ಟೀಂ ಇಂಡಿಯಾದ ಸ್ಟಾರ್ ಆಟಗಾರ, ಕೂಲ್ ಕ್ಯಾಪ್ಟನ್. ಈ ಧೋನಿ ಕೂಡ ಸರ್ಕಾರಿ ಸಂಬಳ ಎಣಿಸಿದವರು. 2001ರಿಂದ 2003ರವರೆಗೆ ಖರಗ್ಪುರ ರೈಲ್ವೆ ಸ್ಟೇಷನ್ನಿನಲ್ಲಿ ಕಡುನೀಲಿ ಕೋಟ್ ಧರಿಸಿ ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಆಗಿ ಓಡಾಡ್ತಿದ್ದ ಧೋನಿ ಯಾರಿಗೂ ಗೊತ್ತೇ ಇರಲಿಲ್ಲ. ಅಂದು ಟಿಟಿಇ ಧೋನಿಯಿಂದ ದಂಡ ಹಾಕಿಸಿಕೊಂಡ ಪ್ರಯಾಣಿಕರೂ ಈಗ ಅವರ ಫ್ಯಾನ್ ಆಗಿದ್ದಾರೋ ಗೊತ್ತಿಲ್ಲ. ಕೇಂದ್ರ ಸರ್ಕಾರಿ ನೌಕರಿಗಿಂತ ಕ್ರಿಕೆಟ್ ಮೇಲೆಯೇ ಪ್ರೀತಿ ಹೆಚ್ಚಾಗಿ, ಧೋನಿ ಮೈದಾನಕ್ಕಿಳಿದೇಬಿಟ್ಟರು. ಇಂದಿನ ಧೋನಿ ಎಲ್ಲರಿಗೂ ಗೊತ್ತು!

ಸೆನ್ಸಾರ್ ಬೋರ್ಡ್‌ನಲ್ಲಿ ಕ್ಲರ್ಕ್ ಆಗಿದ್ದ ದೇವಾನಂದ್

Dev-Anand-Photos-13

‘ಫೂಲೋಂ ಕೆ ರಂಗ್ ಸೆ ದಿಲ್ ಕಿ ಕಲಂ ಸೆ’ ಎನ್ನುತ್ತಾ ಈಗಲೂ ನಮ್ಮನ್ನು ಆವರಿಸಿಕೊಂಡಿರುವ ಬಾಲಿವುಡ್‌ನ ‘ಪ್ರೇಮಪೂಜಾರಿ’ ದೇವಾನಂದ್ ಕೂಡ ಸರ್ಕಾರಿ ಉದ್ಯೋಗಿ ಆಗಿದ್ದವರು. ಮುಂಬೈನ ಸೆನ್ಸಾರ್ ಬೋರ್ಡ್‌ನಲ್ಲಿ ಕ್ಲರ್ಕ್ ಆಗಿದ್ದಾಗ ದೇವಾನಂದ್ ಸಂಭಾವನೆ ಕೇವಲ 85! ಲಾಹೋರ್‌ನ ಗೌರ್ಮೆಂಟ್ ಕಾಲೇಜಿನಲ್ಲಿ ಬಿಎ ಮುಗಿಸಿ, ಮುಂಬೈನಲ್ಲಿ ಸರ್ಕಾರಿ ಕೆಲಸ ಪಡೆದಾಗ ಸೋದರಿ ಶೀಲಾಕಾಂತ್ ಕಪೂರ್ ಊರಿಗೆಲ್ಲ ಸಿಹಿ ಹಂಚಿದ್ದರಂತೆ. ಆದರೆ, ಅದೇ ಕೆಲಸವನ್ನು ತೊರೆದು ‘ಹಮ್ ಏಕ್ ಹೈ’ ಚಿತ್ರಕ್ಕೆ ದೇವ್ ಬಣ್ಣ ಹಚ್ಚಿದಾಗ ಕುಟುಂಬದವರೆಲ್ಲ ಬಯ್ದು ಬುದ್ಧಿಯನ್ನೂ ಹೇಳಿದ್ದರು. ಕೊನೆಗೆ ದೇವ್ ಸ್ಟಾರ್ ಆದಮೇಲೆ ಎಲ್ಲವೂ ತಿಳಿ ಆಯಿತು.

ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿದ್ದ ಹರ್ಭಜನ್ ಸಿಂಗ್

harbhajan

ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ವರ್ಣರಂಜಿತ ವ್ಯಕ್ತಿತ್ವದವರು. ಆಟದಿಂದ, ವಿವಾದಗಳಿಂದಲೂ ಹೆಸರಾದ ಸ್ಟಾರ್ ಆಟಗಾರ. ಮೈದಾನದಲ್ಲಿ ಅನೇಕ ಸಲ ತಾಳ್ಮೆ ಕಳೆದುಕೊಂಡು ಜಗಳಕ್ಕೆ ನಿಲ್ಲುವ ಭಜ್ಜಿ ಅಪರಾಧಗಳನ್ನು ತಡೆಯುವವರೆನ್ನುವುದು ನಿಮ್ಗೆ ಗೊತ್ತಾ? ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಅವರು ಡಿಎಸ್ಪಿ ಆಗಿ ಕೆಲಸ ಮಾಡಿದವರು. ಪೊಲೀಸ್ ಹುದ್ದೆ ಸಪ್ಪೆ ಎನಿಸಿದಾಗ, ಅವರ ಕ್ರಿಕೆಟ್ ಪ್ರೀತಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಪ್ರೇರೇಪಿಸಿತು. ಭಜ್ಜಿ ಇಂದು ಪಂಜಾಬ್ ದಾಟಿಯೂ ಫೇಮಸ್ಸು.

ಬಸ್ ಕಂಡಕ್ಟರ್ ಆಗಿದ್ದ ಜಾನಿ ವಾಕರ್

johny walker

ಹಿಂದಿಚಿತ್ರರಂಗದ ಈ ಕಚಗುಳಿಯ ಹಾಸ್ಯ ನಟನ ಪರಿಚಯ ಇಲ್ಲದವರು ಕಡಿಮೆ. ಬದ್ರುದ್ದೀನ್ ಜಮಾಲುದ್ದೀನ್ ಕಾಝಿ ಎಂಬ ಮೂಲ ಹೆಸರನ್ನೇ ಮರೆತು, ವ್ಹಿಸ್ಕಿಯ ಹೆಸರಿನಲ್ಲಿ ತೆರೆ ಮೇಲೆ ಆಳಿದ ನಟ ಜಾನಿ ವಾಕರ್. ಇವರು ಕೂಡ ರಜನಿಕಾಂತ್ ರೀತಿ ಬಸ್ ಕಂಡಕ್ಟರ್ ಆಗಿ ಸೀಟಿ ಹೊಡೆದವರೇ. ಮುಂಬೈನ ‘ಬಿಇಎಸ್‌ಟಿ’ ಕಂಡಕ್ಟರ್ ಹುದ್ದೆಯಲ್ಲಿದ್ದ ವಾಕರ್ ಅದನ್ನು ತೊರೆದು ಬಾಲಿವುಡ್ ಮೇಲೆ ಮೋಹ ಬೆಳೆಸಿಕೊಂಡರು. 300ಕ್ಕೂ ಅಧಿಕ ಚಿತ್ರಗಳಲ್ಲಿ ಹಾಸ್ಯದ ಕಮಾಲ್ ತೋರಿಸಿದರು.

ಇನ್ಷೂರೆನ್ಸ್ ಉದ್ಯೋಗಿ ಆಗಿದ್ದ ಅಮರೀಶ್ ಪುರಿ

Amrish_Puri

ಹಾಲಿವುಡ್‌ನ ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಮೆಚ್ಚಿಕೊಂಡ ವಿಲನ್. ಮೊಗ್ಯಾಂಬೋ ಖ್ಯಾತಿಯ ಅಮರೀಶ್ ಪುರಿ ಒಂದೊಮ್ಮೆ ಇನ್ಷೂರೆನ್ಸ್ ಉದ್ಯೋಗಿ ಆಗಿದ್ದವರು. ಹಲವು ಸ್ಕ್ರೀನ್ ಟೆಸ್ಟ್‌ಗಳಲ್ಲಿ ವಿಫಲಾರದ ಮೇಲೆ ‘ಇನ್ನು ಸಿನಿಮಾರಂಗ ನನ್ನ ಕೈಹಿಡಿಯೋದಿಲ್ಲ’ ಎಂದುಕೊಂಡು ಸ್ಟೇಟ್ ಇನ್ಶೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಕೆಲ ಕಾಲ ಸೇವೆ ಸಲ್ಲಿಸಿ, ಅದು ಬೋರ್ ಎಂದೆನಿಸಿದಾಗ ಮತ್ತೆ ಸಿನಿಮಾ ಪ್ರಪಂಚವನ್ನು ಸೀರಿಯಸ್ಸಾಗಿ ತೆಗೆದುಕೊಂಡು, ಯಶಸ್ವಿಯೇ ಆದರು.

ಮಿಲಿಟರಿ ಕ್ಯಾಂಪ್ ನಡೆಸುತ್ತಿದ್ದ ದಿಲೀಪ್ ಕುಮಾರ್

Dilip-Kumar

ಬಾಲಿವುಡ್‌ನ ‘ದೇವದಾಸ್’ನ ಮೇಲೆ ಇನ್ನೂ ನಮಗೆ ಎಳ್ಳಷ್ಟು ಪ್ರೀತಿ ಕರಗಿಲ್ಲ. ಕರಗುವುದೂ ಇಲ್ಲ. ಸತ್ಯಜಿತ್ ರೇಯಿಂದಲೇ ಸೈ ಎನಿಸಿಕೊಂಡ ಈ ನಟ ಐದಾರು ದಶಕಗಳ ಕಾಲ ಹಿಂದಿಚಿತ್ರರಂಗಕ್ಕೆ ವಿಶಿಷ್ಟ ಕಳೆ ತಂದುಕೊಟ್ಟಿದ್ದು ಹಳೇಕತೆ. ಇಂಥ ದಿಲೀಪ್ ಕುಮಾರ್ ಕೂಡ ಸರ್ಕಾರಿ ಸಂಬಳ ಎಣಿಸಿದವರೇ. ಪುಣೆಯಲ್ಲಿ ಮಿಲಿಟರಿ ಕ್ಯಾಂಪ್ ನಡೆಸುತ್ತಿದ್ದ ದಿಲೀಪ್ ರುಚಿರುಚಿಯ ಸ್ಯಾಂಡ್‌ವಿಚ್ ಅನ್ನು ವಿಭಿನ್ನವಾಗಿ ತಯಾರಿಸುತ್ತಿದ್ದರಂತೆ. ಆ ಕಾಂಟ್ರ್ಯಾಕ್ಟ್ ಸರ್ಕಾರಿ ಹುದ್ದೆ ಮುಗಿದ ಮೇಲೆ, ಸಿನಿಮಾವೇ ಇವರ ಹೊಟ್ಟೆಗೆ ರೋಟಿ ಹಾಕಿತು.

Comments are closed.