ನವದೆಹಲಿ: ಧೀರ್ಘಕಾಲದಿಂದ ರಕ್ತದೊತ್ತಡ ಎದುರಿಸುತ್ತಿರುವವರು ಹಾಗೂ ಹೃದಯ ಕಾಯಿಲೆ ಸಮಸ್ಯೆ ಇರುವವರು ಜ್ಯೂಸ್ ಜತೆ ಮಾತ್ರೆ ಸೇವಿಸಿದರೆ ಇದು ಪರಿಣಾಮಕಾರಿ ಆಗಿರುವುದಿಲ್ಲ. ಬದಲಾಗಿ ಮಾತ್ರೆ ಸೇವಿಸಲು ನೀರನ್ನೇ ಬಳಸಿ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಹೇಳಿದೆ. ಇದು ಎಲ್ಲಾ ರೋಗಿಗಳಿಗೂ ಅನ್ವಯಿಸುವಂತದ್ದೂ ಆಗಿರುತ್ತದೆ ಎಂದು ಎಚ್ಚರಿಸಿದೆ.
ಜ್ಯೂಸ್ಗಳನ್ನು ಬಳಸುವುದರಿಂದ ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ರೋಗಕ್ಕೆ ಕಾರಣವಾದ ಸೋಂಕುಗಳನ್ನು ಸದೆಬಡಿಯುವ ಶಕ್ತಿಗಳನ್ನೇ ಮಾತ್ರೆ ಕಳೆದುಕೊಂಡಿರುತ್ತದೆ. ಅದರಲ್ಲೂ ಕೆಲವೊಂದು ಜ್ಯೂಸ್ಗಳು ಮಾತ್ರೆಯಲ್ಲಿನ ರೋಗ ನಿರೋಧಕ ಶಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ನೀರಿನಲ್ಲಿಯೇ ಮಾತ್ರೆಗಳನ್ನು ಸೇವಿಸುವುದು ಉತ್ತಮ ಎಂದಿದೆ.
ಕಿತ್ತಳೆ ಮತ್ತು ಸೇಬು ಹಣ್ಣಿನ ಜ್ಯೂಸ್ಗಳಂತೂ ಮಾತ್ರೆಗಳಲ್ಲಿನ ಹೀರುವಿಕೆಯ ಸಾಮರ್ಥ್ಯವನ್ನೇ ಕುಗ್ಗಿಸುತ್ತವೆ. ಇದರಿಂದಾಗಿ ಮಾತ್ರೆ ದೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ದ್ರಾಕ್ಷಿ ಹಣ್ಣಿನ ಜ್ಯೂಸ್ ಕೆಲವು ಔಷಧಗಳಲ್ಲಿನ ಹೀರುವಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ಐಎಂಎ ಕಾರ್ಯದರ್ಶಿ ಡಾ. ಕೆ.ಕೆ. ಅಗರ್ವಾಲ್ ಹೇಳಿದ್ದಾರೆ. ಕೆನಡದ ಒಂಟಾರಿಯೋ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಆದರೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ (ಎಫ್ಡಿಎ) ದ್ರಾಕ್ಷಿ ಜ್ಯೂಸ್ನೊಂದಿಗೆ ಯಾವುದೇ ಔಷಧ ಸೇವನೆ ಒಳ್ಳೆಯದಲ್ಲ ಎಂದಿದೆ.
Comments are closed.