ಕರ್ನಾಟಕ

ಎಲ್ಲೆಲ್ಲೂ ಪ್ರತಿಭಟನೆ ಜನಾಕ್ರೋಶದ ಕೂಗು

Pinterest LinkedIn Tumblr
BJP PROTEST AGNIST GORJE AT MAYURA HOTEL GANDHI STATUE YUDIURAPPA SHOBHA ASHOK MUNIRAJ PABNABA REEDY SUBBNA SURTHI ARE SEEN
BJP PROTEST 

ಬೆಂಗಳೂರು, ಜು. ೧೨- ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಗಳೂರು ಕೊಡವ ಸಂಘದ ಸದಸ್ಯರು ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ದಕ್ಷ, ಪ್ರಾಮಾಣಿಕ ಅಧಿಕಾರಿ ಎಂ.ಕೆ. ಗಣಪತಿ ಅವರ ಸಾವಿಗೆ ಕಾರಣರಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವ ಜಾರ್ಜ್ ಅವರ ಮೇಲೆ ಮೊಕದ್ದಮೆ ದಾಖಲಿಸಬೇಕು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಬೆಂಗಳೂರಿನ ಕೊಡವ ಸಮುದಾಯಕ್ಕೆ ಸೇರಿದ ನೂರಾರು ಮಂದಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

ನಗರದ ಮೌರ್ಯ ಹೊಟೇಲ್ ಬಳಿಯ ಗಾಂಧಿ ಪ್ರತಿಮೆ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ಜನಹಿತವನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಸರ್ಕಾರ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿದೆ. ಕೂಡಲೇ ಸಚಿವ ಜಾರ್ಜ್‌ರವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಅವರು ಹೇಳಿದರು.
ಈ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಸರ್ಕಾರ ಎಂದು ಅಧಿಕಾರದಿಂದ ತೊಲಗುತ್ತದೆ ಎಂದು ಜನ ನಿರೀಕ್ಷಿಸುತ್ತಿದ್ದಾರೆ. ಸಚಿವ ಜಾರ್ಜ್ ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿಯ ಹೋರಾಟ ನಿಲ್ಲದು ಎಂದರು.
ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ಕೆ.ಜೆ ಜಾರ್ಜ್ ಅವರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಬಿಜೆಪಿ ಅವರ ರಾಜೀನಾಮೆ ಕೇಳುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೇಳಿಕೆ ಲಜ್ಜೆಗೆಟ್ಟ ಹೇಳಿಕೆಯಾಗಿದೆ. ಅವರು ಜಾತಿ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ ಎಂದರು.
ಇಡೀ ರಾಜ್ಯದ ಜನತೆ ಜಾರ್ಜ್‌ರವರ ರಾಜೀನಾಮೆ ಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮಾನ- ಮರ್ಯಾದೆ ಇದ್ದರೆ ಜಾರ್ಜ್‌ರವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು.
ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಅವರ ಕುಟುಂಬದಲ್ಲಿ ಸಾಮರಸ್ಯ ಇರಲಿಲ್ಲ ಎನ್ನುವ ಸುಳ್ಳು ಆರೋಪವನ್ನು ಈ ಸರ್ಕಾರ ಮಾಡುತ್ತಿದೆ. ನಿಜಕ್ಕೂ ಸರ್ಕಾರದ ಈ ಹೇಳಿಕೆ ಅಸಹ್ಯ ಎಂದು ಆಕ್ರೋಶದಿಂದ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಕೊಡವ ಸಮುದಾಯದ ಹಲವು ಮಹಿಳೆಯರು ಪಾಲ್ಗೊಂಡಿದ್ದು, ಕೊಡವ ಸಂಘದ ಉಪಾಧ್ಯಕ್ಷೆ ವಾಣಿ ನಾಣಯ್ಯ ಮಾತನಾಡಿ ಡಿವೈಎಸ್ಪಿ ಗಣಪತಿ ಅವರಿಗೆ ಖಿನ್ನತೆ ಇರಲಿಲ್ಲ, ಅವರ ಕುಟುಂಬ ಜೀವನವು ಚೆನ್ನಾಗಿತ್ತು. ಸರ್ಕಾರ ಸುಳ್ಳು ಮಾಹಿತಿಗಳನ್ನು ನೀಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಸಿದೆ. ಇದನ್ನು ಖಂಡಿಸುತ್ತೇವೆ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದೆ ಶೋಭಾಕರಂದ್ಲಾಜೆ, ಶಾಸಕ ಮುನಿರಾಜು, ಜಿಲ್ಲಾ ಪಂಚಾಯತ್ ಸದಸ್ಯ ಮರಿಸ್ವಾಮಿ, ಕಾರ್ಯದರ್ಶಿ ಜಯದೇವ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ ಅಶೋಕ್ ಕುಮಾರ್, ಕೊಡವ ಸಂಘದ ಅಧ್ಯಕ್ಷ ಸುಬ್ಬಯ್ಯ, ಖ್ಯಾತ ವಕೀಲ ಎಂ.ಟಿ. ನಾಣಯ್ಯ ಸೇರಿದಂತೆ ಹಲವು ಕೊಡವ ಮುಖಂಡರು ಪಾಲ್ಗೊಂಡಿದ್ದರು.
ಮುಗಿಲು ಮುಟ್ಟಿದ ಘೋಷಣೆ
ಸರ್ಕಾರ ಹಾಗೂ ಸಚಿವ ಜಾರ್ಜ್ ಅವರ ವಿರುದ್ಧ ಘೋಷಣೆಗಳು ಮುಗಿಲು ಮುಟ್ಟಿದ್ದವು. ಸಚಿವ ಜಾರ್ಜ್‌ರವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತರು ಘೋಷಣೆಗಳನ್ನು ಕೂಗಿದರು.

Comments are closed.