ಕರ್ನಾಟಕ

ಬಿಎಸ್‌ವೈ ವಿರುದ್ಧ ಸೊಗಡು ಶಿವಣ್ಣ ಅಸಮಾಧಾನ

Pinterest LinkedIn Tumblr

bsy

ತುಮಕೂರು, ಜು. ೨- ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವ ಎಸ್. ಶಿವಣ್ಣ ಅವರು ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕದಲ್ಲಿ ವಲಸಿಗರಿಗೆ ಮಣೆ ಹಾಕಿದ್ದು, ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರಿನಲ್ಲಿ ಒಂದೇ ಕುಟುಂಬದವರನ್ನು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯನ್ನು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯರು ಇದ್ದಾರೆ. ಅವರಿಗೆ ಸ್ಥಾನಮಾನ ನೀಡಬೇಕಾಗಿತ್ತು.

ಆದರೆ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪರವರು ಯಾರನ್ನೂ ಕೇಳದೆ, ಈ ಬಗ್ಗೆ ಚರ್ಚಿಸದೆ ನೇಮಕ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹಿರಿಯ ಮುಖಂಡರಿಗೆ ಅಧ್ಯಕ್ಷ ಸ್ಥಾನ ನೀಡಬೇಕಾಗಿತ್ತು. ಆದರೆ ಇದ್ಯಾವುದನ್ನು ಪರಿಗಣಿಸದೆ ಒಂದೇ ಕುಟುಂಬದವರಿಗೆ ಸ್ಥಾನಮಾನ ನೀಡಲಾಗಿದೆ ಎಂದ ಅವರು, ಬಿಜೆಪಿ ಎಂಬ ಹುತ್ತದಲ್ಲಿ ಹಲವಾರು ಹಾವುಗಳು ಸೇರಿಕೊಂಡಿವೆ.

ಯಡಿಯೂರಪ್ಪರವರು ಒಳ್ಳೆಯವರೆ, ಆದರೆ ಅವರ ಸುತ್ತಮುತ್ತಲಿನವರು ಸರಿಯಿಲ್ಲ. ಯಡಿಯೂರಪ್ಪರವರು ಬುಗುರಿ ಇದ್ದಂತೆ. ಆದರೆ ಚಾಟಿ ಬೀಸುವವರೆ ಬೇರೆ. ಹಾಗಾಗಿ ಪಕ್ಷದಲ್ಲಿ ಒಡಕುಂಟಾಗಲು ಕಾರಣವಾಗಿದೆ ಎಂದರು.

ಈ ಬಗ್ಗೆ ಅನಂತಕುಮಾರ್, ಸದಾನಂದಗೌಡ, ಜಗದೀಶ್‌ಶೆಟ್ಟರ್, ಪ್ರಹ್ಲಾದ್‌ಜೋಶಿ, ಆರ್. ಅಶೋಕ್‌ರವರಿಗೂ ಅಸಮಾಧಾನವಿದೆ. ಈ ಅಸಮಾಧಾನವನ್ನು ಈಶ್ವರಪ್ಪ, ಸಿ.ಟಿ. ರವಿ ಮೂಲಕ ವ್ಯಕ್ತಪಡಿಸಲಾಗುತ್ತಿದೆ.

ಕೂಡಲೇ ಜಿಲ್ಲಾ ಸಮಿತಿಗಳಿಗೆ ನೇಮಕ ಮಾಡಿರುವುದನ್ನು ವಜಾಗೊಳಿಸಿ ಮೂಲ ಬಿಜೆಪಿ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ. ನಂದೀಶ್, ಕೆ.ಪಿ. ಮಹೇಶ್, ಗಣೇಶ್, ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Comments are closed.