ಕರ್ನಾಟಕ

ಸರ್ಕಾರಿ ಆಸ್ಪತ್ರೆಗೆ ಸಚಿವರ ತಾಕೀತು

Pinterest LinkedIn Tumblr

saraಬೆಂಗಳೂರು, ಜು. ೨- ಸರ್ಕಾರಿ ಹಾಗೂ ಬಿಬಿಎಂಪಿ ಆಸ್ಪತ್ರೆಗಳು ಬಡ ರೋಗಿಗಳಿಗೆ ನೆರವಾಗದೆ ದೂರ ಉಳಿದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಇಂದು ಇಲ್ಲಿ ಹೇಳಿದರು.

ನಗರದ ಬಸವನಗುಡಿ ವಾರ್ಡ್‌ನ ಬಿಬಿಎಂಪಿ ವಿವಿದ್ಧೋದೇಶ ಕಟ್ಟಡದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಡಯಾಲಿಸಿಸ್ ಕೇಂದ್ರಕ್ಕೆ ಹಿರಿಯ ರಾಜಕಾರಣಿ ಶ್ಯಾಮಣ್ಣ ಅವರ ಹೆಸರು ನಾಮಕರಣ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಅನುಕೂಲವಂತರು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ, ಬೀದಿ ಬದಿ ವ್ಯಾಪಾರಸ್ಥರಿಗೆ ಇಂತಹ ಖಾಯಿಲೆ ಬಂದರೆ ಅವರು ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಕಡಿಮೆ ದರದಲ್ಲಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಸಿಗುವಂತಾಗಬೇಕು ಎಂದರು.

ಜನಪ್ರತಿನಿಧಿಗಳು ಬಡಜನರ ನೆರವಿಗೆ ಧಾವಿಸಬೇಕು. ಕೇಂದ್ರ ಮತ್ತು ರಾಜ್ಯಸರ್ಕಾರ, ಬಿಜೆಪಿ- ಕಾಂಗ್ರೆಸ್ ವೈರಿಗಳೂ ಅಲ್ಲ. ಅಧಿಕಾರದ ಅವಧಿ ಇರುವವರೆಗೂ ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕು ಎಂದರು.

ನನಗೆ ಎಲ್ಲ ಪಕ್ಷಗಳು ಒಂದೆ. ತಿನ್ನುವವರೆಲ್ಲರೂ ಸೇರಿ ತಿನ್ನುವ ಪಾರ್ಟಿ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ ಸಚಿವ ರಮೇಶ್ ಕುಮಾರ್, ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಜನಹಿತ ಮುಖ್ಯವಾಗಬೇಕು ಎಂದರು.

ಶಾಸಕ ರವಿಸುಬ್ರಮಣ್ಯ ಮಾತನಾಡಿ ಹನುಮಂತ ನಗರದಲ್ಲಿ ಸದ್ಯದಲ್ಲೇ ಮಾದರಿ ಶಾಲೆ ಆರಂಭವಾಗಲಿದೆ ಎಂದರು. ಮೇಯರ್ ಮಂಜುನಾಥ ರೆಡ್ಡಿ ಅವರು ಮಡಿವಾಳ ವಾರ್ಡ್‌ನಲ್ಲೂ ಮುಂದಿನ ತಿಗಳು ಡಯಾಲಿಸಿಸ್ ಕೇಂದ್ರ ಆರಂಭವಾಗಲಿದೆ. ಬಸವನಗುಡಿಯಲ್ಲಿ ಬಿಬಿಎಂಪಿ ವಿವಿದ್ಧೋದೇಶ ಕಟ್ಟಡದಲ್ಲಿ ಐಸಿಯು ಘಟಕ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿತ್ ಪಾಷ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಹೆರಿಗೆ ಆಸ್ಪತ್ರೆಗಳಿದ್ದು, ಅವುಗಳನ್ನು ನಗರದ ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸ್ಥಳೀಯ ಪಾಲಿಕೆ ಸದಸ್ಯ ಕಟ್ಟೆ ಸತ್ಯನಾರಾಯಣ ಅವರು ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿ ಬಡವರಿಗೂ ಚಿಕಿತ್ಸೆ ನೆರವು ಸಿಗಲು 100 ಸದಸ್ಯರ ಟ್ರಸ್ಟ್ ರಚಿಸಲಾಗುವುದು. ಪ್ರತಿಯೊಬ್ಬರು ಪ್ರತಿ ತಿಂಗಳು 500 ರೂ.ಗಳನ್ನು ದಾನವಾಗಿ ನೀಡಲಿದ್ದಾರೆ ಎಂದರು.

ಸದ್ಯದಲ್ಲೇ ಈ ಕಟ್ಟಡದಲ್ಲಿ ಲ್ಯಾಬೋರೇಟರಿ, ಇ ಲೈಬ್ರೆರಿ, ಭಾರತೀಯ ಮಹಿಳಾ ಬ್ಯಾಂಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದರು.

ಉಪ ಮೇಯರ್ ಹೇಮಲತಾ, ಪಾಲಿಕೆ ಸದಸ್ಯರಾದ ವೆಂಕಟೇಶ್, ಜಂಟಿ ಆಯುಕ್ತ ಹೇಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Comments are closed.