
ಬೆಂಗಳೂರು: ಪದಾಧಿಕಾರಿಗಳ ಪಟ್ಟಿಯಲ್ಲಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ದೆಹಲಿ ದೊರೆಗಳಿಗೆ ದೂರು ನೀಡಲು ಹೊರಟಿದ್ದ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಭೇಟಿಗೆ ಬಿಜೆಪಿ ಕೇಂದ್ರ ವರಿಷ್ಠರು ಅನುಮತಿಗೆ ನಿರಾಕರಿಸಿದ್ದಾರೆ.
ನಾಳೆ ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಗೆ ಬರುವ ಅಗತ್ಯವಿಲ್ಲ. ಎಲ್ಲಾ ನಾಯಕರು ಒಟ್ಟಾಗಿ ಕುಳಿತು ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.
ಪದಾಧಿಕಾರಿಗಳ ಪಟ್ಟಿಗೋಸ್ಕರ ನವದೆಹಲಿಗೆ ಆಗಮಿಸಿದರೆ ಪಕ್ಷದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ.ಏನೇ ಬಿಕ್ಕಟ್ಟು ಇದ್ದರೂ ಸ್ಥಳೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕೆಂದು ಕಟ್ಟುನಿಟ್ಟಿನ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ. ಈಗಾಗಲೇ ನಿಗದಿಯಾಗಿರುವಂತೆ ನಾಳೆ ಕೇಂದ್ರ ಸಚಿವರು, ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು, ಜಿಲ್ಲಾಧ್ಯಕರು ಸೇರಿದಂತೆ ವಿವಿಧ ಮೋರ್ಚಾಗಳ ಸಭೆ ಕರೆಯಲಾಗಿದೆ.
ನೀವು ಪ್ರತ್ಯೇಕವಾಗಿ ಒಬ್ಬರೇ ಬಂದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಸೇರಿದಂತೆ ಸಂಘಪರಿವಾರದ ನಾಯಕರ ಜೊತೆ ಮಾತುಕತೆ ನಡೆಸಬೇಕು. ಒಬ್ಬೊಬ್ಬರೇ ಪ್ರತ್ಯೇಕವಾಗಿ ದೆಹಲಿಗೆ ಆಗಮಿಸಬಾರದೆಂದು ತಾಕೀತು ಮಾಡಿದ್ದಾರೆ. ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕ ಕಾರಣ ಈಶ್ವರಪ್ಪ ತಮ್ಮ ಹಠಾತ್ ದೆಹಲಿ ಪ್ರವಾಸವನ್ನು ಕೈಬಿಟ್ಟಿದ್ದಾರೆ. ಇತ್ತೀಚೆಗೆ ನೇಮಕಗೊಂಡ ಪದಾಧಿಕಾರಿಗಳ ಪಟ್ಟಿಯಲ್ಲಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬಣದವರಿಗೆ ಆದ್ಯತೆ ನೀಡಿದ್ದಾರೆಂಬುದು ಈಶ್ವರಪ್ಪ ಮತ್ತು ಕೆಲವರ ಆರೋಪವಾಗಿತ್ತು.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಈಶ್ವರಪ್ಪ, ಮುಖಂಡರಾದ ಸಿ.ಟಿ.ರವಿ, ಅಶ್ವಥನಾರಾಯಣ, ಎಸ್.ಎ.ರವೀಂದ್ರನಾಥ್, ಅರವಿಂದ ಲಿಂಬಾವಳಿ, ರವಿಕುಮಾರ್ ಸೇರಿದಂತೆ ಅನೇಕರು ಸಭೆ ನಡೆಸಿದ್ದರು. ಇದೀಗ ನಾಳೆ ಯಡಿಯೂರಪ್ಪ ಸಭೆ ಕರೆದಿರುವುದು ಭಿನ್ನಮತೀಯರು ಪಾಲ್ಗೊಳ್ಳುವರೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
Comments are closed.