ಕರ್ನಾಟಕ

ಭಿನ್ನಮತೀಯರಿಗೆ ಸೊಪ್ಪು ಹಾಕದೆ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಿಸಿ ಟಾಂಗ್ ನೀಡಿದ ಯಡಿಯೂರಪ್ಪ

Pinterest LinkedIn Tumblr

yaddiಬೆಂಗಳೂರು, ಜೂ.29- ಭಿನ್ನಮತೀಯ ಚಟುವಟಿಕೆಗಳಿಗೆ ಸೊಪ್ಪು ಹಾಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಕ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ನಿನ್ನೆಯಷ್ಟೆ ಪಕ್ಷದ ಕಚೇರಿಯಲ್ಲಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡುವಂತೆ ಭಿನ್ನಮತೀಯರು ಪ್ರತ್ಯೇಕ ಸಭೆ ನಡೆಸಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಯಡಿಯೂರಪ್ಪ 31 ಜಿಲ್ಲೆಗಳಿಗೆ ಪ್ರಬಾರಿಗಳನ್ನು ನೇಮಕ ಮಾಡಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ.

ಆಪ್ತರ ಜತೆ ಸಮಾಲೋಚನೆ:

ಬೆಂಗಳೂರಿನ ಡಾಲರ್ಸ್್ ಕಾಲೋನಿಯಲ್ಲಿರುವ ನಿವಾಸದಲ್ಲಿ ಬಿ.ಎಸ್.ಯಡಿಯೂರಪ್ಪ ಪಕ್ಷದಲ್ಲಿ ಉಂಟಾಗಿ ರುವ ಚಟುವಟಿಕೆ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ, ಲೆಹರ್‌ಸಿಂಗ್, ಬಿ.ಜೆ.ಪುಟ್ಟಸ್ವಾಮಿ, ರವಿಕುಮಾರ್ ಹಾಗೂ ಕೆಲ ಆಪ್ತರ ಜತೆ ರಹಸ್ಯ ಮಾತುಕತೆ ನಡೆಸಿದರು. ಭಿನ್ನಮತೀಯ ಚಟುವಟಿಕೆಗಳಿಗೆ ಮುನ್ನುಡಿ ಬರೆದಿರುವ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.

ಪದಾಧಿಕಾರಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡ, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಆರ್‌ಎಸ್‌ಎಸ್ ನಾಯಕರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಿ ತಯಾರಿಸಲಾಗಿತ್ತು. ಆದರೆ, ಈಶ್ವರಪ್ಪ ತಮ್ಮ ಸ್ವಾರ್ಥ ಸಾಧನೆಗಾಗಿ ಪದಾಧಿಕಾರಿಗಳ ಪಟ್ಟಿಯಲ್ಲಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ವಲಸೆ ಬಂದವರಿಗೆ ಸಿಂಹಪಾಲು ನೀಡಲಾಗಿದೆ ಎಂದು ಅಪಪ್ರಚಾರ ನಡೆಸಿದ್ದಾರೆ. 36 ಜಿಲ್ಲಾಧ್ಯಕ್ಷರಲ್ಲಿ 31 ಬಿಜೆಪಿಗೆ ಹಾಗೂ 5 ಸ್ಥಾನಗಳನ್ನು ಕೆಜೆಪಿಯಿಂದ ಬಂದವರಿಗೆ ನೀಡಲಾಗಿದೆ. ಕೆಜೆಪಿ, ಬಿಜೆಪಿ ವಿಲೀನವಾದ ಮೇಲೆ ವಲಸಿಗರು ಮತ್ತು ಮೂಲ ನಿವಾಸಿಗಳೆಂಬ ಭೇದ-ಭಾವ ಏಕೆ ಎಂದು ಪ್ರಶ್ನಿಸಿದ್ದಾರೆ.

ನಾನು ಬಿಜೆಪಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದ ದಿನದಿಂದಲೂ ನನಗೆ ಪಕ್ಷದೊಳಗೆ ಈ ರೀತಿ ಮೂಲೆಗುಂಪು ಮಾಡುವ ಪ್ರಯತ್ನ ನಿರಂತರವಾಗಿ ನಡೆದುಬಂದಿದೆ. ಇಂತಹ ಸುಳ್ಳು ಆರೋಪ ಕೇಳಿ ನನ್ನ ಚರ್ಮ ದಪ್ಪವಾಗಿದೆ. ವರಿಷ್ಠರ ಆದೇಶದಂತೆ ನೇಮಕ ಮಾಡಿರುವಾಗ ಗೊಂದಲ ಏಕೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಮತ್ತು ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೂ ದೆಹಲಿಯಲ್ಲಿ ಸಾಕಷ್ಟು ನಾಯಕರು ಗೊತ್ತಿದ್ದಾರೆ. ಯಾರ ಯಾರ ಸಾಮರ್ಥ್ಯ ಏನೆಂಬುದನ್ನು ತಿಳಿದೇ ಅಧ್ಯಕ್ಷ ಸ್ಥಾನ ನೀಡಲಾಗಿದೆ. ನನಗಿರುವ ಜನಪ್ರಿಯತೆ ಸಹಿಸದೆ ಇಂತಹ ಸುಳ್ಳು ಆರೋಪ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ವಿರೋಧಿಗಳಿಗೆ ಸಡ್ಡು ಹೊಡೆದಿದ್ದಾರೆ. ಪ್ರಭಾರಿಗಳ ನೇಮಕ: ಯಡಿಯೂರಪ್ಪ ಎಲ್ಲ ಜಿಲ್ಲೆಗಳಿಗೂ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಪ್ರಭಾರಿಗಳ ಪಟ್ಟಿ ಈ ಕೆಳಕಂಡಂತಿದೆ.

ಮೈಸೂರು ನಗರ- ಗ್ರಾಮಾಂತರ:

ಸುರೇಶ್‌ಕುಮಾರ್, ಚಾಮರಾಜನಗರ-ವಿಜಯಪುರ: ಶ್ರೀರಾಮುಲು, ದಾವಣಗೆರೆ: ಗೋ.ಮಧುಸೂದನ್, ಚಿತ್ರದುರ್ಗ: ಪೂರ್ಣಿಮಾ ಶ್ರೀನಿವಾಸ್, ತುಮಕೂರು: ವಿ.ಸೋಮಶೇಖರ್, ದಕ್ಷಿಣ ಕನ್ನಡ: ಶಿವಮೊಗ್ಗ-ಉಡುಪಿ-ಅನಂತ್‌ಕುಮಾರ್ ಹೆಗಡೆ, ಚಿಕ್ಕಬಳ್ಳಾಪುರ-ಕೋಲಾರ: ಪಿ.ಸಿ.ಮೋಹನ್, ಹಾಸನ: ಮುನಿರಾಜುಗೌಡ, ಚಿಕ್ಕಮಗಳೂರು-ಕೊಡಗು: ಭಾನು ಪ್ರಕಾಶ್, ಬೀದರ್: ಬಾಬುರಾವ್ ಚೌಹಾಣ್, ಕಲಬುರಗಿ ನಗರ-ಗ್ರಾಮಾಂತರ-ಯಾದಗಿರಿ: ಶಂಕರಪ್ಪ, ಬೆಂಗಳೂರು ನಗರ: ಜಯದೇವ್, ಬೆಂಗಳೂರು ನಗರ ಜಿಲ್ಲೆ: ಸುಬ್ಬನರಸಿಂಹ, ಮಂಡ್ಯ: ಡಾ.ತೇಜಸ್ವಿನಿ ಗೌಡ, ಹುಬ್ಬಳ್ಳಿ-ಧಾರವಾಡ ಮತ್ತು ಗ್ರಾಮಾಂತರ: ನಿರ್ಮಲ್‌ಕುಮಾರ್ ಸುರಾನ, ಕೊಪ್ಪಳ-ಗದಗ: ಗೋವಿಂದ ಕಾರಜೋಳ, ರಾಮನಗರ: ಪಿ.ಮುನಿರಾಜು, ಬಾಗಲಕೋಟೆ-ಚಿಕ್ಕೋಡಿ: ಸುರೇಶ್ ಚನ್ನಬಸಪ್ಪ ಅಂಗಡಿ, ಉತ್ತರ ಕನ್ನಡ: ತಿಂಗಳೆ ವಿಕ್ರಮಾರ್ಜುನ ಹೆಗಡೆ, ಹಾವೇರಿ: ಡಾ.ಮ.ನಾಗರಾಜು, ಬೆಳಗಾವಿ ನಗರ-ಗ್ರಾಮಾಂತರ: ಜಗದೀಶ್ ಹಿರೇಮನೆ, ಬಳ್ಳಾರಿ: ಕರಡಿ ಸಂಗಣ್ಣ, ರಾಯಚೂರು: ನಾಗರಾಜ್ ಕೊಪ್ಪ ನೇಮಕವಾಗಿದ್ದಾರೆ.

Comments are closed.