ಕರ್ನಾಟಕ

ರಾಜ್ಯಾದ್ಯಂತ ಉತ್ತಮ ಮಳೆಯಿಂದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ

Pinterest LinkedIn Tumblr

rainಬೆಂಗಳೂರು, ಜೂ.29- ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು, ಜನತೆ ಮನದಲ್ಲಿ ಸಂತಸ ತಂದಿದೆ. ಇತ್ತೀಚೆಗಷ್ಟೇ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಳೆ ಅಭಾವದ ಬಗ್ಗೆ ಆತಂಕ ವ್ಯಕ್ತಪಡಿಸಿ, ಇನ್ನೊಂದು ವಾರ ವರುಣನ ಕೃಪೆ ತೋರದಿದ್ದರೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುತ್ತದೆ ಎಂದಿದ್ದರು. ನಿನ್ನೆಯಿಂದ ಮುಂಗಾರು ಚುರುಕುಗೊಂಡಿದ್ದು, ರಾಜ್ಯಾದ್ಯಂತ ಉತ್ತಮ ಮಳೆ ಬೀಳುತ್ತಿದ್ದು , ಪ್ರಮುಖ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಪ್ರಪ್ರಥಮವಾಗಿ ಶಿವಮೊಗ್ಗದ ತುಂಗಾ ಜಲಾಶಯ ತುಂಬಿದ್ದು , ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ.

ತುಂಗಾ ಜಲಾಶಯಕ್ಕೆ ಈಗಾಗಲೇ 24,000 ಕ್ಯೂಸೆಕ್ಸ್‌ಗೂ ಹೆಚ್ಚು ಒಳಹರಿವು ದಾಖಲಾಗಿದ್ದು , 13 ಕ್ರಿಸ್‌ಗೇಟ್‌ಗಳಿಂದ 26 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಇನ್ನು ಭದ್ರಾ ಜಲಾಶಯ ನೀರು ಶೇಖರಣೆ ಒಟ್ಟು ಸಾಮರ್ಥ್ಯ 186 ಅಡಿ ಇದ್ದು , (ಪ್ರಸ್ತುತ 120? ಅಡಿ ನೀರು ಸಂಗ್ರಹವಿದೆ ) ಈಗಾಗಲೇ 8 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು , ಇನ್ನೆರಡು ಮೂರು ದಿನದಲ್ಲಿ ಜಲಾಶಯ ತುಂಬಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ. ಆಗುಂಬೆ , ಉಡಿಕಲ್ಲು ಘಾಟಿನಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಳೆ ಮೈಸೂರು ಭಾಗದ ಜೀವ ನದಿ ಕಾವೇರಿ ನದಿಯ ಕೆಆರ್‌ಎಸ್‌ಗೆ 21 ಸಾವಿರ ಕ್ಯೂಸೆಕ್ಸ್ ಒಳಹರಿವು ಹೆಚ್ಚಾಗುತ್ತಿದೆ. ಅಣೆಕಟ್ಟು ನೀರಿನ ಮಟ್ಟ 70 ಅಡಿ ತಲುಪಿದೆ. ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ಗೆ ನೀರಿನ ಒಳಹರಿವು ಹೆಚ್ಚಾಗಿದ್ದು , ಸ್ವಲ್ವ ಸಮಾಧಾನ ತಂದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೂ 1500 ಕ್ಯೂಸೆಕ್ಸ್ ಹೆಚ್ಚು ನೀರು ಹರಿದು ಬರುತ್ತಿದ್ದು,ಇನ್ನು ಕೇವಲ ಎರಡು-ಮೂರು ದಿನಗಳಲ್ಲಿ ಅಣೆಕಟ್ಟು ತುಂಬುವ ಸಾಧ್ಯತೆ ಇದೆ ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜಿಗೆ ರಜೆ:

ಕೊಡಗು, ಮಡಿಕೇರಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾಗಮಂಡಲ ಜಲಾವೃತಗೊಂಡಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ರಾಜ್ಯದ ದೊಡ್ಡ ಬಳ್ಳಾರಿಯ ತುಂಗಭದ್ರಾ ಜಲಾಶಯಕ್ಕೂ ನೀರಿನ ಒಳಹರಿವು ಹೆಚ್ಚಾಗುತ್ತಿದ್ದು , ಗಾಜನೂರು ಜಲಾಶಯದಿಂದ ನೀರು ಹರಿದು ಬರುತ್ತಿದೆ.

ಚಿಕ್ಕಮಗಳೂರು :

ಜಿಲ್ಲೆಯಲ್ಲಿ ಮಲೆನಾಡು ಪ್ರದೇಶ ಹಾಗೂ ಬಯಲು ಸೀಮೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಚುರುಕು ಪಡೆದಿದೆ. ನಿನ್ನೆ ಇಡೀ ರಾತ್ರಿ ಮಳೆಯಾಗಿದ್ದು, ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಕುದುರೆಮುಖ, ಕಳಸ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ತರೀಕೆರೆ, ಎನ್‌ಆರ್ ಪುರ, ಅಜ್ಜಂಪುರ, ಶಿವನಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಇಂದು ಬೆಳಗ್ಗೆಯಿಂದಲೇ ತುಂತುರು ಮಳೆ ಆರಂಭಗೊಂಡು ಉತ್ತಮ ಮಳೆ ಸುರಿಯುತ್ತಿದೆ. ಕಳೆದ 24 ತಾಸುಗಳಲ್ಲಿ 166.ಮಿಮೀ ಮಳೆ ಬಿಟ್ಟಿದೆ. ಉಳಿದಂತೆ ಚಿಕ್ಕಮಗಳೂರು ನಗರ 14.1ಮಿಮೀ, ವಸ್ತಾರೆ 20.2, ಆಲ್ದೂರು 44.6, ಕೆಆರ್ ಪೇಟೆ 14.2ಅತ್ತಿಗೊಂಡಿ, 44.6ಮಿಮೀ, ಸಂಗಮೇಶ್ವರ ಪೇಟೆ 51.5ಮಿಮೀ, ಕಡೂರು ಪಟ್ಟಣ 10.6ಮಿಮೀ, ಸಖರಾಯಪಟ್ಟಣ 46.6ಮಿಮೀ, ಕೊಪ್ಪ ಪಟ್ಟಣ 100ಮಿಮೀ, ಹರಿಹರಪುರ 125ಮಿಮೀ, ದಸರಿಘಟ್ಟ 88.6ಮಿಮೀ, ಕೊಟ್ಟಿಗೆಹಾರ 90.2ಮಿಮೀ, ಗೋಣಿಬೀಡು 40ಮಿಮೀ, ಕಳಸ 100ಮಿಮೀ, ಬಾಳೆಹೊನ್ನೂರು 56ಮಿಮೀ, ಕೆರೆಕಟ್ಟೆ 110ಮಿಮೀ, ಶೃಂಗೇರಿ ಪಟ್ಟಣ 99ಮಿಮೀ, ತರೀಕೆರೆ ಪಟ್ಟಣ 15.4ಮಿಮೀ ಮಳೆಯಾಗಿದೆ.

ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತ:

ಉತ್ತರ ಕರ್ನಾಟಕ, ಉತ್ತರ ಕನ್ನಡ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಹಲವೆಡೆ ಮಳೆ-ಗಾಳಿಯಿಂದ ಮರಗಳು ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-17ರ ಬಳಿ ಮರವೊಂದು ಉರುಳಿ ಬಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸುಮಾರು ಒಂದು ಕಿಲೋ ಮೀಟರ್ ದೂರ ವಾಹನಗಳು ರಸ್ತೆಯಲ್ಲೇ ನಿಂತಿದ್ದು, ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರು ಹರಸಾಹಸ ಪಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಗಾಜನೂರು ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು, ಹೊಸಪೇಟೆ, ತುಂಗಭದ್ರಾ ಅಣೆಕಟ್ಟಿನಲ್ಲಿ ನೀರಿನ ಅರಿವು ಜಾಸ್ತಿಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ನಾಗರಿಕರು ಮನೆ ಬಿಟ್ಟು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸ್ವರ್ಣ, ಸೀತಾ, ಸೌಪರ್ಣಿಕ ನದಿಗಳಲ್ಲಿ ನೀರು ಸಂಗ್ರಹ ಜಾಸ್ತಿಯಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೆರೆಯ ಶಿರೂರು ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಮಳೆ ಇನ್ನೂ ಸುರಿಯ್ತುದ್ದು, ನೀರಿನ ಹರಿವು ಜಾಸ್ತಿಯಾಗುವ ಸಾಧ್ಯತೆಯಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ಅಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಬಿತ್ತನೆ ನಂತರ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಒಂದೇ ಸಮನೆ ಸುರಿಯುತ್ತಿರುವ ಮಳೆ ತೃಪ್ತಿ ತಂದಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆ ಚುರುಕುಗೊಂಡಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಹುಬ್ಬಳ್ಳಿ-ಧಾರವಾಡಗಳಲ್ಲೂ ಮಳೆ ಸುರಿಯುತ್ತಿದ್ದು, ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ್‌ನಲ್ಲಿ ಮಳೆ ಸುರಿಯುತ್ತಿರುವ ಕಾರಣ ಮಲಪ್ರಭ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕಂದಾಯ, ಪೊಲೀಸ್ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ದಾವಿಸಿ ಹಾನಿಯ ಅಂದಾಜು ನಡೆಸುತ್ತಿದ್ದಾರೆ. ಸಂತ್ರಸ್ಥರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಯಾವುದೇ ಆತಂಕ ಬೇಡ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Comments are closed.