ಕರ್ನಾಟಕ

ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್; ಫೈನಲ್ ನಲ್ಲಿ ಮುಗ್ಗರಿಸಿದ ಆರ್‌ಸಿಬಿ; ಗೇಲ್‌ಅಬ್ಬರ ವ್ಯರ್ಥ

Pinterest LinkedIn Tumblr

6

ಬೆಂಗಳೂರು: ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ 2016 ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ.

ಡೇವಿಡ್ ವಾರ್ನರ್ ಪ್ರಖರ ನಾಯಕತ್ವದ ಮುಂದೆ ತವರಿನ ಅಂಗಳದಲ್ಲಿ ಪ್ರಶಸ್ತಿ ಗೆದ್ದು ಮೆರೆಯುವ ರಾಯಲ್‌ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಕರಗಿತು.

ಐಪಿಎಲ್ 9ನೇ ಆವೃತ್ತಿಯ ಫೈನಲ್‌ನಲ್ಲಿ ಬೆನ್ ಕಟಿಂಗ್ ಅವರ ಆಲ್‌ರೌಂಡ್ ಆಟದಿಂದ 8 ರನ್‌ಗಳ ಅಂತರದಿಂದ ಗೆದ್ದ ಸನ್‌ರೈಸರ್ಸ್ ತಂಡದ ಸಂಭ್ರಮ ಮುಗಿಲುಮುಟ್ಟಿತು. ಡೇವಿಡ್ ವಾರ್ನರ್ ಅವರ ಯೋಜನಾಬದ್ಧ ಮತ್ತು ಯಾವುದೇ ಹಂತದಲ್ಲಿಯೂ ಕೈಚೆಲ್ಲದ ಛಲದ ನಾಯಕತ್ವಕ್ಕೆ ಮೊಟ್ಟಮೊದಲ ಪ್ರಶಸ್ತಿ ಒಲಿಯಿತು.

5

ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಉತ್ತರವಾಗಿ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 ರನ್ ಹೊಡೆಯಿತು. 2009, 2011 ರಲ್ಲಿಯೂ ರನ್ನರ್ಸ್ ಅಪ್ ಆಗಿದ್ದ ಬೆಂಗಳೂರು ತಂಡವು ಮೂರನೇ ಬಾರಿ ಫೈನಲ್ ತಲುಪಿತ್ತು.

2013ರಲ್ಲಿ ಐಪಿಎಲ್ ಪ್ರವೇಶಿಸಿದ್ದ ಸನ್‌ರೈಸರ್ಸ್ ತಂಡ ಮೊದಲ ಸಲ ಫೈನಲ್ ತಲುಪಿ ಮಿರಿಮಿರಿ ಮಿಂಚುವ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ವಾರ್ನರ್ ಬಳಗವು ಲೀಗ್ ಹಂತದಲ್ಲಿ ತನ್ನ ಮೊದಲ ಪಂದ್ಯವನ್ನು ಇಲ್ಲಿಯೇ ಆಡಿ ಸೋತಿತ್ತು. ಒಟ್ಟು ಎಂಟು ಪಂದ್ಯಗಳನ್ನು ಗೆದ್ದು ಮೂರನೇ ಸ್ಥಾನ ಪಡೆದಿದ್ದ ಸನ್‌ರೈಸರ್ಸ್ ಎಲಿಮಿನೇಟರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ಮತ್ತು ಎರಡನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸನ್‌ರೈಸರ್ಸ್ ಜಯಿಸಿದ ನಂತರ ಬಾನೆತ್ತರಕ್ಕೆ ಹಾರಿದ ಸಿಡಿಮದ್ದುಗಳ ಸದ್ದು ಮತ್ತು ಹೊಗೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಕಣ್ಣೀರು, ನಿರಾಸೆಗಳು ಸೇರಿಹೋದವು.

3

ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ (76; 38ಎ, 4ಬೌಂ, 8ಸಿ) ಅವರು ಒಂದರ ಹಿಂದೆ ಒಂದರಂತೆ ಬೌಂಡರಿ, ಸಿಕ್ಸರ್‌ಹೊಡೆದಾಗ ಕುಣಿದು ಕುಪ್ಪಳಿಸಿದ್ದ ಜನರು ಮೌನವಾಗಿ ಹೊರನಡೆದರು. ಟೂರ್ನಿಯುದ್ದಕ್ಕೂ ಅಬ್ಬರದ ಆಟದ ಮೂಲಕ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಟ್ರೋಫಿಯನ್ನು ಎತ್ತಿ ಮುದ್ದಾಡುವ ಅವಕಾಶ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಎ.ಬಿ. ಡಿವಿಲಿಯರ್ಸ್, ಸ್ಥಳೀಯ ಹೀರೊ ಕೆ.ಎಲ್. ರಾಹುಲ್, ಸ್ಟುವರ್ಟ್ ಬಿನ್ನಿ, ಶೇನ್ ವ್ಯಾಟ್ಸನ್ ಅವರ ಆಟ ರಂಗೇರಲಿಲ್ಲ.

ಆ ಎರಡು ಅವಕಾಶಗಳು..
ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಗೆಲ್ಲಲು ಎರಡು ಅವಕಾಶಗಳಿದ್ದವು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸನ್‌ರೈಸರ್ಸ್ ತಂಡವನ್ನು 160 ರಿಂದ 170 ರನ್‌ಗಳಿಗೆ ನಿಯಂತ್ರಿಸುವ ಅವಕಾಶ ಕೈಚೆಲ್ಲಿತ್ತು. ತಮ್ಮ ಭರ್ಜರಿ ಅರ್ಧಶತಕದ (69; 38ಎ, 8ಬೌಂ, 3ಸಿ) ಮೂಲಕ ಉತ್ತಮ ಅಡಿಪಾಯ ಹಾಕಿದ್ದರು.

14ನೇ ಓವರ್‌ನಲ್ಲಿ ಬೆಂಗಳೂರಿನ ಎಡಗೈ ಮಧ್ಯಮವೇಗಿ ಎಸ್. ಅರವಿಂದ್ ಅವರು ಡೇವಿಡ್ ವಾರ್ನರ್ ಮತ್ತು 17ನೇ ಓವರ್‌ನಲ್ಲಿ ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿ ಸನ್‌ರೈಸರ್ಸ್ ರನ್‌ಗಳಿಕೆಗೆ ಕಡಿವಾಣ ಹಾಕಿದ್ದರು. 16.1 ಓವರ್‌ಗಳಲ್ಲಿ ಕೇವಲ 147 ರನ್‌ಗಳಿಗೆ 4 ವಿಕೆಟ್‌ಕಳೆದುಕೊಂಡಿದ್ದ ತಂಡವನ್ನು ಕಟ್ಟಿಹಾಕುವ ಅವಕಾಶವನ್ನು ಉಳಿದ ಬೌಲರ್‌ಗಳು ಬಳಸಿಕೊಳ್ಳಲಿಲ್ಲ.

1

ಬೆನ್ ಕಟಿಂಗ್ ಅವರನ್ನು ಕಟ್ಟಿಹಾಕಲು ವಿಫಲರಾದ ಬೌಲರ್‌ಗಳು ಕೊನೆಯ 23 ಎಸೆತಗಳಲ್ಲಿ 61 ರನ್‌ಗಳು ಸನ್‌ರೈಸರ್‌ಖಾತೆ ಸೇರಲು ಕಾರಣರಾದರು. 20ನೇ ಓವರ್‌ಬೌಲಿಂಗ್ ಮಾಡಲು ಶೇನ್ ವ್ಯಾಟ್ಸನ್‌ಗೆ ಅವಕಾಶ ಕೊಟ್ಟ ಕೊಹ್ಲಿ ಹಣೆ ಚಚ್ಚಿಕೊಳ್ಳುವುದಷ್ಟೇ ಬಾಕಿಯಿತ್ತು. ಅದೊಂದೆ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಬೆನ್ ಕಟಿಂಗ್ 24 ರನ್‌ಗಳನ್ನು ಕೊಳ್ಳೆ ಹೊಡೆದರು. ಮಧ್ಯಮವೇಗಿ ಕ್ರಿಸ್ ಜೋರ್ಡಾನ್ ಮೂರು ವಿಕೆಟ್ ಕಬಳಿಸಿದರೂ ಆರು ವೈಡ್‌ಬಾಲ್‌ಹಾಕಿ ದುಬಾರಿಯಾದರು. ಬೃಹತ್ ಗುರಿ ಬೆನ್ನತ್ತಿದ ತಂಡಕ್ಕೆ ಕ್ರಿಸ್ ಗೇಲ್ ಮತ್ತು ಕೊಹ್ಲಿ ಗಟ್ಟಿಮುಟ್ಟಾದ ಬುನಾದಿ ಹಾಕಿದ್ದರು. ಅದು ತಂಡಕ್ಕೆ ಜಯಿಸಲು ಸಿಕ್ಕಿದ್ದ ಎರಡನೇ ಅವಕಾಶವಾಗಿತ್ತು.

2

ಗೇಲ್–ಕೊಹ್ಲಿ ಅಬ್ಬರ..
ಕ್ರಿಸ್ ಗೇಲ್ ಬ್ಯಾಟ್‌ನಿಂದ ಗುಡುಗು, ಸಿಡಿಲುಗಳ ಅಬ್ಬರ ಎದುರಾಳಿಗಳ ಎದೆಗೆ ಅಪ್ಪಳಿಸಿದ್ದಂತೂ ನಿಜ. ಇಡೀ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಸನ್‌ರೈಸರ್ಸ್ ತಂಡದ ಬೌಲರ್‌ಗಳ ಬೆವರಿಳಿಸಿಬಿಟ್ಟರು. ಕೇವಲ 54 ಎಸೆತಗಳಲ್ಲಿ 100 ರನ್‌ಹರಿದುಬಂದಿದ್ದವು. ಅವರು ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರ ಆಟವನ್ನು ಇನ್ನೊಂದು ಬದಿಯಿಂದ ನೋಡುತ್ತಿದ್ದ ಕೊಹ್ಲಿ ಆಗ ಕೇವಲ 7 ರನ್ ಮಾತ್ರ ಗಳಿಸಿದ್ದರು!
ಗೇಲ್ ಆಟದ ಅಬ್ಬರಕ್ಕೆ ವಾರ್ನರ್ ಬೆದರಿ ಹೋಗಿದ್ದರು. ಸನ್‌ರೈಸರ್ಸ್ ಚಿಯರ್‌ಬೆಡಗಿಯರು ಮಂಕಾಗಿ ಕುಳಿತಿದ್ದರು.

4

11ನೇ ಓವರ್‌ನಲ್ಲಿ ಬೆನ್ ಕಟಿಂಗ್ ಬೌಲಿಂಗ್‌ನಲ್ಲಿ ವಿಪುಲ್ ಶರ್ಮಾ ಪಡೆದ ಕ್ಯಾಚ್‌ಗೆ ಗೇಲ್ ಆಟಕ್ಕೆ ತೆರೆ ಬಿತ್ತು. 53 ಎಸೆತಗಳಲ್ಲಿ 84 ರನ್‌ಗಳ ಅಗತ್ಯವಿತ್ತು. ಅದು ಅಸಾಧ್ಯವೂ ಆಗಿರಲಿಲ್ಲ. ಒಂದು ಬಾರಿ ಜೀವದಾನ ಪಡೆದು, ಏಳನೇ ಅರ್ಧಶತಕ ಗಳಿಸಿದ್ದ ಕೊಹ್ಲಿ (54; 35ಎ, 5ಬೌ, 2ಸಿ) ಮತ್ತು ಎ.ಬಿ. ಡಿವಿಲಿಯರ್ಸ್‌ಜೋಡಿಯ ಮೇಲೆ ಎಲ್ಲರಿಗೂ ಭರವಸೆ ಇತ್ತು. ಯುವ ಬೌಲರ್ ಬರೀಂದರ್ ಸರಾನ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದ ಕೊಹ್ಲಿ ನಿರ್ಗಮಿಸುವುದರೊಂದಿಗೆ ಎಲ್ಲವೂ ಬುಡಮೇಲಾಯಿತು. ಸಚಿನ್ ಬೇಬಿ ಮತ್ತು ಸ್ಟುವರ್ಟ್ ಬಿನ್ನಿ ಹೊರತುಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಹೋರಾಟ ತೋರಲಿಲ್ಲ. ಶಿಸ್ತಿನ ಫೀಲ್ಡಿಂಗ್‌ಮತ್ತು ಮೊನಚಾದ ಬೌಲಿಂಗ್ ಮಾಡಿದ ಸನ್‌ರೈಸರ್ಸ್ ತಂಡ ಮಿಂಚಿತು.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್ 7 ಕ್ಕೆ 208 (20 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್ ಸಿ ಇಕ್ಬಾಲ್ ಅಬ್ದುಲ್ಲಾ ಬಿ ಎಸ್. ಅರವಿಂದ್ 69
ಶಿಖರ್ ಧವನ್ ಸಿ ಕ್ರಿಸ್ ಜೋರ್ಡಾನ್ ಬಿ ಯಜುವೇಂದ್ರ ಚಾಹಲ್ 28
ಮೊಯಿಸೆಸ್ ಹೆನ್ರಿಕ್ಸ್ ಸಿ ಯಜುವೇಂದ್ರ ಚಾಹಲ್ ಬಿ ಕ್ರಿಸ್ ಜೋರ್ಡಾನ್ 04
ಯುವರಾಜ್ ಸಿಂಗ್ ಸಿ ಶೇನ್ ವ್ಯಾಟ್ಸನ್ ಬಿ ಕ್ರಿಸ್ ಜೋರ್ಡಾನ್ 38
ದೀಪಕ್ ಹೂಡಾ ಸಿ ವಿರಾಟ್ ಕೊಹ್ಲಿ ಬಿ ಅರವಿಂದ್ 03
ಬೆನ್ ಕಟಿಂಗ್ ಔಟಾಗದೆ 39
ನಮನ್ ಓಜಾ ರನ್‌ಔಟ್ (ಶೇನ್ ವ್ಯಾಟ್ಸನ್) 07
ವಿಪುಲ್ ಶರ್ಮಾ ಸಿ ಯಜುವೇಂದ್ರ ಚಾಹಲ್ ಬಿ ಕ್ರಿಸ್ ಜೋರ್ಡಾನ್ 05
ಭುವನೇಶ್ವರ್ ಕುಮಾರ್ ಔಟಾಗದೆ 01
ಇತರೆ: (ವೈಡ್-11, ಬೈ-1, ಲೆಗ್‌ಬೈ -2) 14
ವಿಕೆಟ್‌ಪತನ: 1–63 (ಧವನ್; 6.4), 2–97 (ಹೆನ್ರಿಕ್ಸ್: 9.5), 3–125 (ವಾರ್ನರ್: 13.5), 4–147 (ಹೂಡಾ; 15.6), 5–148 (ಯುವರಾಜ್; 16.1), 6–158 (ಓಜಾ; 17,1), 7–174 (ವಿಪುಲ್; 18.4).
ಬೌಲಿಂಗ್‌: ಎಸ್. ಅರವಿಂದ್ 4–0–30–2, ಕ್ರಿಸ್ ಗೇಲ್ 3–0–24–0 (ವೈಡ್ 3), ಶೇನ್ ವ್ಯಾಟ್ಸನ್ 4–0–61–0 (ವೈಡ್ 2), ಯಜುವೇಂದ್ರ ಚಾಹಲ್ 4–0–35–1, ಇಕ್ಬಾಲ್ ಅಬ್ದುಲ್ಲಾ 1–0–10–0, ಕ್ರಿಸ್ ಜೋರ್ಡಾನ್ 4–0–45–3 (ವೈಡ್ 6)

ಆರ್‌ಸಿಬಿ 7 ಕ್ಕೆ 200 (20 ಓವರ್‌ಗಳಲ್ಲಿ)

ಕ್ರಿಸ್ ಗೇಲ್ ಸಿ ವಿಪುಲ್ ಶರ್ಮಾ ಬಿ ಬೆನ್ ಕಟಿಂಗ್ 76
ವಿರಾಟ್ ಕೊಹ್ಲಿ ಬಿ ಬರೀಂದರ್ ಸರಾನ್ 54
ಎ.ಬಿ. ಡಿವಿಲಿಯರ್ಸ್ ಸಿ ಮೊಯಿಸೆಸ್ ಹೆನ್ರಿಕ್ಸ್ ಬಿ ವಿಪುಲ್ ಶರ್ಮಾ 05
ಕೆ.ಎಲ್. ರಾಹುಲ್ ಬಿ ಬೆನ್ ಕಟಿಂಗ್ 11
ಶೇನ್ ವ್ಯಾಟ್ಸನ್ ಸಿ ಮೊಯಿಸೆಸ್ ಹೆನ್ರಿಕ್ಸ್ 11
ಸಚಿನ್ ಬೇಬಿ ಔಟಾಗದೆ 18
ಸ್ಟುವರ್ಟ್ ಬಿನ್ನಿ ರನ್‌ಔಟ್ (ಹೂಡಾ/ಓಜಾ) 09
ಕ್ರಿಸ್ ಜೋರ್ಡಾನ್ ರನ್‌ಔಟ್ (ಓಜಾ) 03
ಇಕ್ಬಾಲ್ ಅಬ್ದುಲ್ಲಾ ಔಟಾಗದೆ 04
ಇತರೆ:(ಲೆಗ್‌ಬೈ 5, ವೈಡ್ 4) 09
ವಿಕೆಟ್‌ಪತನ: 1–114 (ಗೇಲ್; 10.3), 2–140 (ಕೊಹ್ಲಿ; 12.5), 3–148 (ಡಿವಿಲಿಯರ್ಸ್; 13.5), 4–160 (ರಾಹುಲ್; 15.2), 5–164 (ವ್ಯಾಟ್ಸನ್; 16.3), 6–180 (ಬಿನ್ನಿ; 18.1), 7–194 (ಜೋರ್ಡಾನ್ ; 19.3)
ಬೌಲಿಂಗ್‌: ಭುವನೇಶ್ವರ್ ಕುಮಾರ್4–0–25–0 (ವೈಡ್ 1), ಬರೀಂದರ್ ಸರಾನ್ 3–0–41–1 (ವೈಡ್ 2), ಬೆನ್ ಕಟಿಂಗ್ 4–0–35–2 (ವೈಡ್ 1), ಮುಸ್ತಫಿಜರ್ ರೆಹಮಾನ್ 4–0–37–1, ಮೊಯಿಸೆಸ್ ಹೆನ್ರಿಕ್ಸ್ 3–0–40–0, ವಿಪುಲ್ ಶರ್ಮಾ 2–0–17–1
ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 8 ರನ್ ಜಯ.

ಪಂದ್ಯಶ್ರೇಷ್ಠ: ಬೆನ್‌ಕಟಿಂಗ್‌(ಸನ್‌ರೈಸರ್ಸ್‌)
ಸರಣಿ ಶ್ರೇಷ್ಠ: ವಿರಾಟ್‌ಕೊಹ್ಲಿ (ಆರ್‌ಸಿಬಿ).

Comments are closed.