ಕರ್ನಾಟಕ

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹ

Pinterest LinkedIn Tumblr

samatha

ಬೆಂಗಳೂರು: ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸದಿದ್ದರೆ, ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ದಂಗೆ ಏಳಬೇಕಾಗುತ್ತದೆ ಹಾಗೂ ಸರ್ಕಾರವನ್ನು ಪತನಗೊಳಿಸಬೇಕಾಗುತ್ತದೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಸಮತಾ ಸೈನಿಕ ದಳ ಕಾರ್ಯಕರ್ತರು ನಗರದ ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಏರ್ಪಡಿಸಿದ್ದ ಬೃಹತ್ ಱ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದ್ದರೂ ಇದುವರೆಗೆ ಕಾಯ್ದೆ ಜಾರಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ಬಾರಿಯೂ ಕುಂಟು ನೆಪಗಳನ್ನು ಒಡ್ಡುತ್ತ, ಸಮಯ ದೂಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಕಾಯ್ದೆ ಜಾರಿಯಾಗದಿದ್ದರೆ, ಮುಂದೆಂದೂ ಅದು ಜಾರಿಯಾಗುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಡೆಸ್ನಾನದ ವಿರುದ್ಧ ಕಾಂಗ್ರೆಸ್ ದ್ವನಿ ಎತ್ತಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮಡೆಸ್ನಾನ ನಿರಾತಂಕವಾಗಿ ನಡೆದಿದೆ.

ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ಸೋಮಯಾಗ ನಡೆಸುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇದೂ ಕೂಡ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ನಡೆದಿರುವುದು ದುರಾದೃಷ್ಟಕರ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಾಮರಾಜನಗರದಲ್ಲಿ ದಲಿತರನ್ನು ನರಬಲಿ ಕೊಡಲಾಗಿದೆ. ಆದರೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿಲ್ಲ ಎಂದು ಹೇಳಿದ ಅವರು, ಇಂತಹ ಮೂಢನಂಬಿಕೆಗಳ ಆಚರಣೆಗಳಿಗೆ ಕಡಿವಾಣ ಹಾಕಬೇಕಾದರೆ, ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಾಲಕೃಷ್ಣ, ವಿಜಯಕುಮಾರ್, ರಾಂಪುರ ನಾಗೇಶ್, ಜಗನ್ನಾಥ್, ರಘು, ಮತ್ತಿತರರು ಭಾಗವಹಿಸಿದ್ದರು.

Write A Comment