
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಮೇ 8: ಅಪರಿಚಿತರ ತಂಡವೊಂದು ಇಬ್ಬರ ಮೇಲೆ ಚೂರಿ,ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಅನತಿ ದೂರದಲ್ಲಿರುವ ಕಮರ್ಷಿಯಲ್ ಕಟ್ಟದ ಸಮೀಪ ಇಂದು ಸಂಜೆ ನಡೆದಿದೆ. ಈತನ ಜೊತೆ ಇದ್ದ ಇನ್ನೋರ್ವ ಹಲ್ಲೆಯಿಂದ ಗಂಭೀರ ಗಾಯಗೊಂಡ ಪರಿಣಾಮ ಈತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತನನ್ನು ಕದ್ರಿ ಕಂಬಳ ನಿವಾಸಿ ರೋಹಿತ್ (42) ಎಂದು ಗುರುತಿಸಲಾಗಿದೆ. ದಾಳಿಯಿಂದ ಹಲ್ಲೆಗೊಳಗಾಗಿ ಗಾಯಗೊಂಡ ವ್ಯಕ್ತಿಯನ್ನು ನಂತೂರ್ ಈಡನ್ ಗಾರ್ಡನ್ ಸಮೀಪದ ನಿವಾಸಿ ರೋಚ್ ಯಾನೆ ರೋಷನ್ ಎಂದು ಗುರುತಿಸಲಾಗಿದೆ.
ಆರೋಪಿಗಳು ರೋಹೀತ್‌ನ ತಲೆಗೆ ಮರದ ದೊಣ್ಣೆ ಹಾಗೂ ಕಲ್ಲಿನಿಂದ ಬಲವಾಗಿ ಹೊಡೆದಿದ್ದು, ಬಳಿಕ ಚೂರಿಯಿಂದ ಹೊಟ್ಟೆಗೆ ಇರಿದಿದ್ದಾರೆ. ಅತೀಯಾದ ರಕ್ತಸ್ತ್ರಾವದಿಂದ ರೋಹಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ರೋಷನ್ ಅವರ ಬೆರಳು, ಸೊಂಟದ ಭಾಗ ಹಾಗೂ ಮುಖಕ್ಕೆ ಗಾಯವಾಗಿದ್ದು, ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಷನ್ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಟಾಟ ಮೋಟಾರ್ಸ್ ಕಾರು ಮಾರಾಟ ಮಳಿಗೆಯ ಪಕ್ಕದ ಭವನಿ ಗಣೇಶ್ ಕಮರ್ಷಿಯಲ್ ಕಾಂಪ್ಲೆಕ್ಷ್‌ನ ಮೊದಲ ಮಹಡಿಯಲ್ಲಿ ಕಚೇರಿಯನ್ನು ಹೊಂದಿದ್ದು, ಈತನ ಸ್ನೇಹಿತ ರೋಹಿತ್ ಅಗಾಗ ಇವರ ಕಚೇರಿಗೆ ಬಂದು ಹೋಗುತ್ತಿದ್ದ. ಇವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದರು ಎನ್ನಲಾಗಿದೆ.
ಇಂದು ಕೂಡ ರೋಹಿತ್ ತನ್ನ ಸ್ನೇಹಿತ ಕಚೇರಿಗೆ ಬಂದಿದ್ದು, ಬಳಿಕ ಸಂಜೆ 5ಗಂಟೆಯ ಸುಮಾರಿಗೆ ಇಬ್ಬರೂ ಕಚೇರಿಯಿಂದ ಹೊರಗೆ ಬರುತ್ತಿದ್ದ ಸಂದರ್ಭ ಇವರ ಬರುವಿಕೆಗೆ ಮೊದಲೇ ಆಟೋ ರೀಕ್ಷಾದಲ್ಲಿ ಬಂದು ಕಾಯುತ್ತಿದ್ದ ಆರೋಪಿಗಳು ಏಕಾಏಕಿ ಇವರಿಬ್ಬರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಇವರಿಬ್ಬರೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಮತ್ತೆ ಕಚೇರಿಯೊಳಗೆ ಓಡಲು ಯತ್ನಿಸಿದಾಗ ಆಟ್ಟಾಡಿಸಿಕೊಂಡು ಬಂದ ಆರೋಪಿಗಳು ಕಟ್ಟಡದ ಬಾಗಿಲ ಬಳಿಯಲ್ಲೇ ಇವರ ಮೇಲೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಉರ್ವಾ ಹಾಗೂ ಬರ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೊಲೆಗೆ ಹಣಕಾಸು ವ್ಯವಹಾರ ಶಂಕೆ..!
ರೋಹಿತ್ ಈ ಹಿಂದೆ ಹಣಕಾಸು ಸಂಸ್ಥೆಯೊಂದರಲ್ಲಿ ಹಣ ವಸೂಲಾತಿ ಮಾಡುವ ಕಾರ್ಯ ನಿರ್ವಾಹಿಸುತ್ತಿದ್ದು, ಬಳಿಕ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಬಳಿಕ ತನ್ನ ಚಾಲಕ ವೃತಿಯನ್ನು ಬಿಟ್ಟು ಕುಡಿತದ ಚಟಕ್ಕೆ ಬಲಿಯಾಗಿ, ಜೊತೆಗೆ ಗಾಂಜಾ ಸೇವನೆಯಲ್ಲೂ ತೊಡಗಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ಆರೋಪಿಗಳು ಹಾಗೂ ರೋಹಿತ್ ಮಧ್ಯೆ ಕಳೆದ 20 ದಿನಗಳಿಂದ ಹಣಕಾಸು ವ್ಯವಹಾರದ ವಾಜ್ಯ ನಡೆಯುತ್ತಿದ್ದು, ಈ ಹಿಂದೆ ಮಾತಿನ ಚಕಮಕಿ ಕೂಡ ನಡೆದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ರೋಹಿತ್‌ನನ್ನು ಹತ್ಯೆಗೈಯಲಾಗಿರ ಬೇಕೆಂಬ ಶಂಕೆಯನ್ನು ಸ್ಥಳಿಯರು ವ್ಯಕ್ತಪಡಿಸಿದ್ದಾರೆ.