
ಮಂಗಳೂರು, ಮೇ 4: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಪರಿಸರದಲ್ಲಿ ನಡೆದ ಬಿಜೆಪಿ ಮುಖಂಡ ಭರತ್ರಾಜ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ನಿನ್ನೆ ಮಧ್ಯರಾತ್ರಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೃಷ್ಣಾಪುರ ನಿವಾಸಿಗಳಾದ ಅಬ್ದುಲ್ ಅಝೀಝ್, ರಿಝ್ವಾನ್, ಇರ್ಫಾನ್ ಹಾಗೂ ಸೂರಿಂಜೆ ನಿವಾಸಿ ಬರಕತ್ ಅಲಿ ಎನ್ನಲಾಗಿದೆ.
ಆರೋಪಿಗಳು ಪಡುಬಿದ್ರೆಯ ಎಸ್ಎಸ್ ಲಾಡ್ಜ್ನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಕಲೆಹಾಕಿದ ಸುರತ್ಕಲ್ ಠಾಣಾ ಪೊಲೀಸರು ನಿನ್ನೆ ಮಧ್ಯರಾತ್ರಿ ಲಾಡ್ಜಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಪ್ರಿಲ್ 13ರಂದು ಮಾರಾಕಯುಧಗಳೊಂದಿಗೆ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ 4- 5 ಮಂದಿ ದುಷ್ಕರ್ಮಿಗಳು ಸುರತ್ಕಲ್ ನಿವಾಸಿ ಬಿಜೆಪಿ ಯುವ ಮುಖಂಡ ಭರತ್ರಾಜ್ ಅವರ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಆದರೆ ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನ, ಮಾರಕಾಯುಧ ಮತ್ತು ಮೊಬೈಲ್ ಫೋನ್ ಸ್ಥಳದಲ್ಲಿ ಸಿಕ್ಕಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು.ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಭರತ್ರಾಜ್ ಅವರನ್ನು ತಕ್ಷಣ ಸುರತ್ಕಲ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿತ್ತು.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಸುರತ್ಕಲ್ ಬಿಜೆಪಿ ಮುಖಂಡ ಭರತ್ರಾಜ್
ಬಂಧನಕ್ಕೆ ಪಾಲೆಮಾರ್ ಆಗ್ರಹ :
ಈ ನಡುವೆ ಎಪ್ರಿಲ್ 18ರಂದು ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ಉತ್ತರ ವಲಯದ ಅಧ್ಯಕ್ಷ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ನೇತೃತ್ವದ ನಿಯೋಗ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿತ್ತು.
ಬಿಜೆಪಿ ಯುವ ಮುಖಂಡ ಭರತ್ರಾಜ್ ಅವರ ಕೊಲೆ ಯತ್ನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಸಂತ್ರಸ್ತ ಭರತ್ರಾಜ್ ಇವರು ರಾಜಕೀಯ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲ ಕಾರ್ಯಕರ್ತರಾಗಿದ್ದು, ಅವರ ಏಳಿಗೆಯನ್ನು ಸಹಿಸದೇ ಕೊಲೆಗೆ ವಿಫಲ ಯತ್ನ ನಡೆದಿರುವುದು ನಿಸ್ಸಂದೇಹವಾಗಿ ಕಂಡು ಬರುತ್ತದೆ. ಘಟನೆಯಲ್ಲಿ ವಾಹನದಲ್ಲಿದ್ದ ಆರೋಪಿಗಳಲ್ಲದೆ ಬಾಹ್ಯ ಬೆಂಬಲ ನೀಡಿ ಸ್ಥಳೀಯ ಕಿಡಿಗೇಡಿಗಳೂ ಭಾಗಿಯಾಗಿರುವ ಶಂಕೆ ಇದೆ. ಎಲ್ಲದಕ್ಕೂ ಮಿಗಿಲಾಗಿ ಪರಿಸರದಲ್ಲಿ ಕೋಮು ದ್ವೇಷದ ಜ್ವಾಲೆ ಎಬ್ಬಿಸುವ ಕುತ್ಸಿತ ಪ್ರಯತ್ನ ಇದಾಗಿದೆ.ತನಿಖಾ ಪ್ರಕ್ರಿಯೆಯನ್ನು ವಿಳಂಬಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಈ ಕೊಲೆಯತ್ನ ಪ್ರಕರಣದತ ನಿಖೆಯನ್ನು ತೀವ್ರಗೊಳಿಸಬೇಕು.ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡ ಎಲ್ಲಾ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಾನೂನು ರೀತಿಯ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ತನಿಖಾ ಪ್ರಕ್ರಿಯೆಯು ಇನ್ನಷ್ಟು ವಿಳಂಬಗೊಂಡಲ್ಲಿ ಬಿಜೆಪಿ ಉಗ್ರ ಪ್ರತಿಭಟನೆಯ ಹಾದಿ ತುಳಿಯಲಿದ್ದು, ಮುಂದಿನ ಪರಿಣಾಮಗಳಿಗೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರೆ ಹೊಣೆಯಾಗಲಿದೆ. ಸದರಿ ಪರಿಸರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಆದ್ಯ ಗಮನಹರಿಸಬೇಕೆಂದೂ ಮನವಿ ಮೂಲಕ ಆಗ್ರಹಿಸಲಾಗಿತ್ತು.