ಬೆಂಗಳೂರು,ಮೇ2- ಬೌರಿಂಗ್ ಆಸ್ಪತ್ರೆ , ರಾಮನಗರ ಸೇರಿದಂತೆ ಇನ್ನೂ ಎಂಟು ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಆಗಿ ಮೇಲ್ದರ್ಜೆಗೇರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ರಾಮನಗರ ಆರೋಗ್ಯ ವಿವಿಯಲ್ಲಿ ಮೆಡಿಕಲ್ ಸ್ಥಾಪನೆ ಮಾಡಲಾಗುವುದು. ಅದೇ ರೀತಿ ಜಿಲ್ಲೆಗೊಂದರಂತೆ ಮೆಡಿಕಲ್ ಕಾಲೇಜು ಆರಂಭಿಸಲಾಗುವುದು ಎಂದರು. ಕಳೆದ ಮೂರು ವರ್ಷಗಳಲ್ಲಿ ಈಗಾಗಲೇ ಆರು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ವಿವೇಚನೆಗೆ: ಸಂಪುಟ ಪುನಾರಚನೆ ಮಾಡುವ ವಿಚಾರ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು , ಅದರಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಕಳೆದ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಎಂದ ಅವರು, ದಲಿತ ಸಿಎಂ ಚರ್ಚೆ ವಿಚಾರಕ್ಕೆ ಹೋಗುವುದಿಲ್ಲ. ಅದನ್ನು ಚರ್ಚೆ ಮಾಡಲು ದಿಗ್ಗಜರೇ ಇದ್ದಾರೆ ಎಂದರು.