ಮುಂಬೈ, ಏ.9-ಯುಗಾದಿ ವಿಶೇಷವೋ ಎಂಬಂತೆ ಮಹಿಳೆಯರಿಗೊಂದು ಸಂತಸದ ಸುದ್ದಿ. ತನ್ನ ದಶಕಗಳ ಕಾಲದ ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟ ಶನಿ ದೇವರ ದೇವಸ್ಥಾನದ ಗರ್ಭಗುಡಿಗೆ ಮಹಿಳೆಯರು ಪ್ರವೇಶ ಮಾಡಲು ಕೊನೆಗೂ ಅವಕಾಶ ನೀಡಿದೆ. ಶನಿ ಸಿಂಗ್ಗಾಪುರ ದೇವಸ್ಥಾನದ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದ ಕೆಲವೇ ಸಮಯದಲ್ಲಿ, ಗರ್ಭಗುಡಿ ಪ್ರವೇಶಕ್ಕಾಗಿ ನಿರ್ಣಾಯಕ ಹೋರಾಟ ನಡೆಸಿದ್ದ ಭೂ ಮಾತಾ ಬ್ರಿಗೇಡ್ನ ನಾಯಕಿ ತೃಪ್ತಿ ದೇಸಾಯಿ ತಮ್ಮ ಸಂಗಡಿಗರೊಂದಿಗೆ ಮಹಾರಾಷ್ಟ್ರದ ಅಹ್ಮದ್ನಗರ್ ಜಿಲ್ಲೆ ಯಲ್ಲಿರುವ ಶನಿದೇವರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ, ಪೂಜೆ ಸಲ್ಲಿಸಿದರು.ಯುಗಾದಿ ಹಬ್ಬದ ದಿನವಾದ ಶುಕ್ರವಾರವೇ ಈ ಮಹತ್ವದ ಬೆಳವಣಿಗೆಯಾಗಿರುವುದು ಅತ್ಯಂತ ವಿಶೇಷವಾಗಿದೆ.
ತೃಪ್ತಿ ದೇಸಾಯಿ ಅವರ ತಂಡ ಇಲ್ಲಿಗೆ ಆಗಮಿಸುವ ಮೊದಲೇ ಇಲ್ಲಿಗೆ ಭೇಟಿ ನೀಡಿದ್ದ ಭೂ ಮಾತಾ ಬ್ರಿಗೇಡ್ನಿಂದ ಹೊರಬಂದಿದ್ದ ಕಾರ್ಯಕರ್ತೆಯರಿಗೆ ಗರ್ಭಗುಡಿಗೆ ಪ್ರವೇಶಿಸಿ ದೇವರ ಮೇಲೆ ಹರಳೆಣ್ಣೆ ಸುರಿದು ಅಭಿಷೇಕ ಮಾಡಿದ್ದರು. ದೇವಸ್ಥಾನ ಸಮಿತಿ ತನ್ನ ನಿರ್ಧಾರ ಪ್ರಕಟಿಸುವ ಕೆಲಸಮಯ ಮೊದಲೇ ಸುಮಾರು 300 ಮಂದಿ ಮಹಿಳೆಯರು ಬಲವಂತವಾಗಿ ಗರ್ಭಗುಡಿ ಪ್ರವೇಶಿಸಿ ಜಲಾಭಿಷೇಕ ಮಾಡಿದ್ದರು. ತೃಪ್ತಿ ದೇಸಾಯಿ ಅವರು ಕಳೆದ ಹಲವು ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸಿದ್ದರು. ಇದೀಗ ಶನಿ ಸಿಂಗ್ಲಾಪುರದ ಶನಿದೇವರ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡುವಂತೆ ಹೋರಾಡಿದ್ದ ತೃಪ್ತಿ ದೇಸಾಯಿ, ಇದರ ನಂತರ ಇದೀಗ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದ ಪ್ರವೇಶಕ್ಕೆ ಹೋರಾಟ ಆರಂಭಿಸಿದ್ದಾರೆ.
ಇದು ಮಹಿಳಾ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತೃಪ್ತಿ ದೇಸಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂಬೈ ಹೈಕೋರ್ಟ್ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವಂತೆ ಆದೇಶಿಸಿದ್ದರೂ ಆಡಳಿತ ಮಂಡಳಿ ಮಹಿಳೆಯರಿಗೆ ಅವಕಾಶ ನೀಡಿರಲಿಲ್ಲ.