ಬೆಂಗಳೂರು, ಮಾ.21-ಅಪಘಾತಕ್ಕೊಳಗಾಗಿ ಗಾಯಗೊಂಡ ಯುವಕ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಪ್ರಜ್ಞಾಹೀನ ಸ್ಥಿತಿ ತಲುಪಿರುವ ಸಂಬಂಧ ಇಂದು ಸಂಜೆಯೊಳಗೆ ವರದಿ ನೀಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ನಿರ್ದೇಶಕರಾದ ಡಾ.ವಿಮಲಾ ಪಾಟೀಲ್, ಸಂಜಯ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ತಿಲಕ್ ನೇತೃತ್ವದಲ್ಲಿ ಸಮಿತಿ ರಚಿಸಿ ಕೂಡಲೇ ವರದಿ ನೀಡುವಂತೆ ಯು.ಟಿ.ಖಾದರ್ ತಿಳಿಸಿದ್ದಾರೆ. ಅಲ್ಲದೆ, ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಕಿಶೋರ್ ಅವರನ್ನು ನೋಡಲು ನಿಮ್ಹಾನ್ಸ್ ಆಸ್ಪತ್ರೆಗೆ ತೆರಳುವುದಾಗಿ ಹೇಳಿದ್ದಾರೆ.
ಶನಿವಾರ ಸಂಜೆ ಸರ್ಜಾಪುರ-ಬಾಗಲೂರು ಬಳಿಯ ಭೂಪನಹಳ್ಳಿ ನಿವಾಸಿ ಕಾರು ಚಾಲಕ ಕಿಶೋರ್ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಬಳಿಯ ಅನಗೊಂಡನಹಳ್ಳಿ ಸಮೀಪ ರಸ್ತೆ ಅಪಘಾತ ಸಂಭವಿಸಿದೆ. ತೀವ್ರವಾಗಿ ಪೆಟ್ಟು ಬಿದ್ದು ನರಳುತ್ತಿದ್ದ ಈತನ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುವನ್ನು ವೈಟ್ಫೀಲ್ಡ್ ಸಮೀಪದ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಯ ಹೆಸರು ಸೇರಿದಂತೆ ಯಾವುದೇ ಮಾಹಿತಿ ಇಲ್ಲದ ಕಾರಣ ಬೆಳಗ್ಗೆ 9 ಗಂಟೆಯಾದರೂ ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡದೆ, ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ನಂತರ ಅಲ್ಲಿಂದ 11 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಮಾಡಿ ವರದಿ ಬಂದ ನಂತರ ನಿಮ್ಹಾನ್ಸ್ಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಹೇಳಿದ್ದಾರೆ.
ಅಲ್ಲಿಯವರೆಗೆ ಗಾಯಾಳುವಿಗೆ ಯಾವುದೇ ಚಿಕಿತ್ಸೆ ಸಿಕ್ಕಿಲ್ಲ. ಸದ್ಯ ರೋಗಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಎಡಭಾಗದ ಕೈ-ಕಾಲು ಸ್ವಾಧೀನ ಕಳೆದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ಕುಟುಂಬದವರಿಗೆ ಮಾಹಿತಿಯೇ ಇಲ್ಲ. ಟಿವಿಯಲ್ಲಿ ನೋಡಿದ ಮೇಲೆ ಅವರಿಗೆ ಮಾಹಿತಿ ಸಿಕ್ಕಿದೆ.ಅಪಘಾತ ಸಂಭವಿಸಿದ ತಕ್ಷಣ ಗಾಯಾಳು ಕಿಶೋರ್ಗೆ ಚಿಕಿತ್ಸೆ ದೊರೆತಿದ್ದರೆ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ. ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿರುವ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಯು.ಟಿ.ಖಾದರ್ ತಿಳಿಸಿದರು.