ಬೆಂಗಳೂರು,ಮಾ೨೦-ರಾಜ್ಯ ಸರ್ಕಾರ ಪಿಯು ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳಲು ಪದವಿ ಪೂರ್ವ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶಾಸಕರ ಭವನದ ಸಭಾಂಗಣದಲ್ಲಿ ಇಂದು ಜರುಗಿದ ಸಭೆಯಲ್ಲಿ ಮಾತನಾಡಿದ ಪದವಿ ಪೂರ್ವ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ, ಪಿಯು ಉಪನ್ಯಾಸಕರು ವೇತನ ತಾರತಮ್ಯ ನಿವಾರಣೆಗೆ ೧೯೯೮ರಿಂದಲೂ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಆದರೆ ಯಾವುದೇ ಸರ್ಕಾರ ಸಮಸ್ಯೆ ಬಗೆಹರಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ವರ್ಷದ ನವೆಂಬರ್‌ನಲ್ಲಿ ನಾಲ್ಕು ಹಂತದ ಹೋರಾಟ ನಡೆಸಲು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ತೀರ್ಮಾನ ತೆಗೆದುಕೊಂಡಿದ್ದು, ಅದರಂತೆ ಸಿಎಂಗೆ ಮನವಿ, ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ, ಪರೀಕ್ಷೆ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು. ಆದರೆ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಆಗ ನೀಡಿದ ಭರವಸೆಯಂತೆ ನಡೆದುಕೊಳ್ಳಲಿಲ್ಲ ಎಂದರು.
ಪ್ರತಿ ಬಾರಿ ಉಪನ್ಯಾಸಕರು ಪ್ರತಿಭಟನೆ ಕೈಗೊಂಡಾಗ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆ ಕೈಬಿಡುವುದು ಒಳಿತೆಂದು ಜನತೆ, ಮಾಧ್ಯಮಗಳು ಆಗ್ರಹಿಸುತ್ತವೆ. ನಾವೂ ಸಹ ಅದೇ ಕಾರಣಕ್ಕೆ ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ. ಆದರೆ ಸರ್ಕಾರ ಅದನ್ನೇ ದೌರ್ಬಲ್ಯವೆಂದು ಭಾವಿಸಿ ಬೇಡಿಕೆ ಈಡೇರಿಸದೇ ವಂಚಿಸುತ್ತಾ ಬರುತ್ತಿದೆ. ಬಜೆಟ್‌ನಲ್ಲಿ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಬಹುದೆಂದು ನಿರೀಕ್ಷಿಸಿದ್ದು ಹುಸಿಯಾಯಿತು. ಹೀಗಾಗಿ ಉಪನ್ಯಾಸಕರಿಗೆ ಈಗ ಮಾಡು ಇಲ್ಲವೇ ಮಡಿ ಎಂಬಂತೆ ಮೌಲ್ಯಮಾಪನ ಬಹಿಷ್ಕಾರವೊಂದೇ ಉಳಿದಿರುವ ಮಾರ್ಗವೆಂದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗೆ ಜಿ.ಕುಮಾರನಾಯ್ಕ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ವರದಿ ನೀಡಿ ನಾಲ್ಕೂವರೆ ವರ್ಷ ಕಳೆದಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೀಗ ೭ ನೇ ವೇತನ ಆಯೋಗ ರಚನೆಯಾಗುತ್ತಿರುವುದರಿಂದ ವೇತನ ತಾರತಮ್ಯ ನಿವಾರಣೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಹಾಗಾಗಿ ಈ ಹಿಂದೆ ತೆಗೆದುಕೊಂಡಿರುವ ನಿರ್ಣಯದಂತೆ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಭಹಿಷ್ಕಾರ ನಡೆಸುವುದೊಂದೇ ಉಳಿದಿರುವ ಮಾರ್ಗವಾಗಿದೆ. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಅನಿರ್ಧಿಷ್ಟಾವಧಿ ಹೋರಾಟ ನಡೆಸೋಣ. ಇದಕ್ಕೆ ಎಲ್ಲರ ಬೆಂಬಲ ಅಗತ್ಯವೆಂದರು.
ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಎಸ್.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ನಿಂಗೇಗೌಡ ಎ.ಎಚ್, ಕೋಶಾಧ್ಯಕ್ಷ ಜಯಣ್ಣ, ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಪ್ರಕಾಶ, ಮಂಜುನಾಥ್. ಕೆ.ಆರ್. ಮತ್ತಿತರರು ಹಾಜರಿದ್ದರು.
ಕರ್ನಾಟಕ