
ಮಂಗಳೂರು,ಮಾ.19 : ದ.ಕ. ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್‌ನ್ನು ನಿರ್ವಹಣೆಗಾಗಿ 30 ವರ್ಷಗಳ ಲೀಸ್‌ನಡಿ ಕೆಎಂಸಿ ಆಸ್ಪತ್ರೆಗೆ ಹಸ್ತಾಂತರಿಸುವ ಕುರಿತು ರಾಜ್ಯ ಸರಕಾರ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ಆಗಿಲ್ಲ, ಯಾವುದೇ ಪ್ರಸ್ತಾವನೆಯೂ ಇಲ್ಲ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಶನಿವಾರ ವೆನ್‌ಲಾಕ್‌ನ ಮಕ್ಕಳ ವಿಶೇಷ ಚಿಕಿತ್ಸಾ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೇಡಿಗೋಶನ್ ಆಸ್ಪತ್ರೆಗೆ 25 ಕೋಟಿ ರೂ. ವೌಲ್ಯದ ಕಟ್ಟಡ ಕಟ್ಟಿ ಕೊಡುವುದಾಗಿ ಭರವಸೆ ನೀಡಿ ಸರಕಾರಿ ಸೌಲಭ್ಯದಲ್ಲಿ ಶೇ. 50ರಷ್ಟು ರಿಯಾಯಿತಿ ಪಡೆದಿರುವ ಕೆಎಂಸಿ ಆ ಸೌಲಭ್ಯವನ್ನು ಈಗಲೂ ಮುಂದುವರಿಸುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.


ಕೆಎಂಸಿಯಿಂದ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾದ ಹಾಗೂ 30 ವರ್ಷಗಳ ಅವಧಿಗೆ ಲೀಸ್ ನೀಡುವ ಕೆಎಂಸಿ ಪ್ರಸ್ತಾವನೆ ಕುರಿತಂತೆ ಸುದ್ದಿಗಾರರು ಸಚಿವ ಖಾದರ್ ಅವರನ್ನು ಪ್ರಶ್ನಿಸಿದಾಗ, ಅದು ತಮಗೆ ತಿಳಿದಿಲ್ಲ. ಅದು ಜಿಲ್ಲಾಡಳಿತದ ವತಿಯಿಂದ ನಡೆದ ಸಭೆಯಾಗಿದೆ ಎಂದು ಹೇಳುವ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ನಡುವೆ ಯಾವುದೇ ಸಂಬಂಧವಿಲ್ಲ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ಕೆಎಂಸಿಗೆ ಲೀಸ್ ನೀಡುವ ಬಗ್ಗೆ ನಿರ್ಧಾರವನ್ನು ರಾಜ್ಯ ಮಟ್ಟದಲ್ಲಿ ಕೈಗೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯ ಜನತೆಯ ತೀರ್ಮಾನಕ್ಕೆ ಬದ್ಧವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಖಾದರ್ ಹೇಳಿದರು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶವಿದೆ. ಕಳೆದ ವರ್ಷವೂ ಅಡಚಣೆ ಆಗಿದೆ ಎಂದವರು ಹೇಳಿದರು.