ರಾಷ್ಟ್ರೀಯ

ವಿದ್ಯಾರ್ಥಿಗಳ ಅಮಾನತು ಪ್ರಶ್ನಿಸಿ ಕಾಲೇಜು ಹಾಸ್ಟೆಲ್‌ಗೆ ಬೆಂಕಿ

Pinterest LinkedIn Tumblr

44

(ಸಂಗ್ರಹ ಚಿತ್ರ)

ನಾಮಕ್ಕಲ್ (ತಮಿಳ್ನಾಡು): ರಾಸಿಪುರಂ ಬಳಿಯ ಮುತ್ಯಾಮ್ಮಲ್ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಂಧಲೆ ಮಾಡಿದ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್‌ಗೆ ಬೆಂಕಿ ಇಟ್ಟ ಘಟನೆ ನಡೆದಿದೆ.

ಸುದ್ದಿಮಾಧ್ಯಮವೊಂದರ ವರದಿ ಪ್ರಕಾರ, ಕಾಲೇಜಿನ ಹಾಸ್ಟೆಲ್ ರೂಂಗೆ ಬೆಂಕಿ ಇಟ್ಟ ವಿದ್ಯಾರ್ಥಿಗಳು ಮದ್ಯದ ಬಾಟಲಿಗಳನ್ನು ಬಿಸಾಡಿ ಹಾಸ್ಟೆಲ್ ಕೋಣೆಯಲ್ಲಿರುವ ಹಾಸಿಗೆಗಳನ್ನು ಹಾನಿ ಮಾಡಿದ್ದಾರೆ.

ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಲೇಜು ಹಾಸ್ಟೆಲ್‌ನ ಶೌಚಾಲಯದಲ್ಲಿ ನೀರಿನ ಅಭಾವವಿದ್ದು, ಇದನ್ನು ಪ್ರಶ್ನಿಸಿದಾಗ ಕಾಲೇಜು ಅಧಿಕೃತರು ಮತ್ತು ಇಬ್ಬರು ವಿದ್ಯಾರ್ಥಿಗಳ ನಡುವೆ ವಾಗ್ವಾದಗಳಾಗಿವೆ. ತದನಂತರ ಕಾಲೇಜು ಅಧಿಕೃತರ ಜತೆ ವಾಗ್ವಾದ ನಡೆಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು.

ರಾಸಿಪುರಂ ಬಳಿಯಿರುವ ಕಕ್ಕವೇರಿಯ ಮುತ್ಯಾಮ್ಮಲ್ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರಿಸುಮಾರು 4,500 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 780 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಮಾರ್ಚ್ 17ರಂದು ಮನೋಜ್ ಪ್ರಸಾದ್ ಮತ್ತು ಎಂ. ತರುಣ್ ವರ್ಷನ್ ಎಂಬ ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ನೀರಿಲ್ಲದೇ ಇದ್ದಾಗ ಹಾಸ್ಟೆಲ್ ವಾರ್ಡನ್ ಜತೆ ಜಗಳವಾಡಿದ್ದರು. ಈ ಇಬ್ಬರು ವಿದ್ಯಾರ್ಥಿಗಳು ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದು, ಇವರನ್ನು ಕಾಲೇಜು ಅಮಾನತುಗೊಳಿಸಿತ್ತು.

ಈ ಅಮಾನತು ನಿರ್ಧಾರವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್‌ಗೆ ಬೆಂಕಿ ಹಚ್ಚಿದ್ದಾರೆ. ಇದೀಗ ಕಾಲೇಜು ಹಾಸ್ಟೆಲ್ ನ್ನು ಮುಚ್ಚಲಾಗಿದ್ದು, ಅಲ್ಲಿದ್ದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.

ಘಟನೆ ಹಿನ್ನಲೆಯಲ್ಲಿ ಹಾಸ್ಟೆಲ್ ನ ಒಳಗೆ ಮದ್ಯ ಬಾಟಲಿ ಹೇಗೆ ಬಂತು? ಹಾಸ್ಟೆಲ್‌ನಲ್ಲಿ ಎಲ್ಲ ವ್ಯವಸ್ಥೆ ಸರಿ ಇದೆಯೇ? ಎಂಬುದರ ಬಗ್ಗೆ ನಾಮಗಿರಿಪೇಟೈ ರೆವೆನ್ಯೂ ಇನ್ಸ್‌ಪೆಕ್ಟರ್ ವಿಜಯ ಲಕ್ಷ್ಮಿ ತನಿಖೆ ನಡೆಸುತ್ತಿದ್ದಾರೆ.

Write A Comment