ಕನ್ನಡ ವಾರ್ತೆಗಳು

ದೇಶದ ಪ್ರಸಕ್ತ ಕಾನೂನಿನ ಬಗ್ಗೆ ಮರು ಪರಿಶೀಲನೆ ನಡೆಸುವ ಅಗತ್ಯ ಇದೆ : ಕೇಂದ್ರ ಸಚಿವ ಡಿವಿಎಸ್‌

Pinterest LinkedIn Tumblr

DVS_Speach_VV_1

ಮಂಗಳೂರು: ದೇಶದ ಪ್ರಸಕ್ತ ಕಾನೂನಿನ ಪ್ರಕಾರ ದೇಶದ್ರೋಹದ ಸೆಕ್ಷನ್‌ನ ವಾಖ್ಯಾನದಲ್ಲಿ ಇನ್ನಷ್ಟು ಸ್ಪಷ್ಟತೆ ಹಾಗೂ ವಿಸ್ತಾರತೆ ನೀಡಬೇಕು ಎಂಬ ಅಂಶ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆದು ಹಂತಹಂತವಾಗಿ ಈ ಕಾನೂನಿನ ಬಗ್ಗೆ ಮರು ಪರಿಶೀಲನೆ ನಡೆಸುವ ಅಗತ್ಯ ಇದೆ ಎಂದು ಕೇಂದ್ರ ಕಾನೂನು ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅಯೋಜಿಸಲಾದ `ಗಾಂಧಿ ವಿಚಾರಧಾರೆ ಸಾರ್ವಕಾಲಿಕ’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಬದಲಾವಣೆಗೆ ಪೂರಕವಾಗಿ ಆಡಳಿತದಲ್ಲಿ ಬದಲಾವಣೆಗಳು ನಡೆಯಬೇಕು. ದೇಶಕ್ಕಾಗಿ ಬದುಕುವ ಮನೋಭಾವ ಬೆಳೆಸಬೇಕು. ಆದರೆ ಗಾಂಧೀಜಿಯಿಂದ ಘೋಷಣೆಯಾದ ಭಾರತ ಮಾತಾಕೀ ಜೈ ಎನ್ನುವುದಕ್ಕೂ ಲೋಕಸಭೆ, ವಿಧಾನಸಭೆಯಲ್ಲಿ ಅಪಸ್ವರ ಬರುತ್ತಿತುವುದು ಖೇದಕರವಾಗಿದೆ. ಇಂತಹ ಸನ್ನಿವೇಶದಲ್ಲಿ ಯುವಜನತೆಯಲ್ಲಿ ದೇಶದ ಬಗ್ಗೆ ಉತ್ತಮ ಭಾವನೆ ಮೂಡಿಸಬೇಕು ಎಂದು ಡಿವಿ ಹೇಳಿದರು.

ಪ್ರಮುಖ ಭಾಷಣ ಮಾಡಿದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಿದರೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ. ಅದರ ಬದಲು ಪ್ರಜಾತಂತ್ರ ಉಳಿಸಲು ಮುಂದಾಗಬೇಕು. ಗಾಂಧಿ ವಿಚಾರಗಳ ಪರಿಚಯವಾಗಬೇಕು ಎಂದು ಹೇಳಿದರು.

ನಿಟ್ಟೆ ವಿ.ವಿ ಕುಲಧಿಪತಿ ವಿನಯ ಹೆಗ್ಡೆ ಮಾತನಾಡಿ ದೇಶದ ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ದೇಶದಲ್ಲಿ ಘರ್ಷಣೆಗೆ ಕಾರಣವಾಗುವ ದೇಶ ವಿಭಜನೆಯ ಮಾತನಾಡುವುದು ಸಹ್ಯವಾದುದ್ದಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಮುಕ್ತ ಚರ್ಚೆ ನಡೆಯಬೇಕು. ಆದರೆ ದೇಶದ ಸಮಗ್ರತೆ, ದೇಶ ಭಕ್ತಿಗಿಂತ ಮೀರಿ ನಮ್ಮ ವರ್ತನೆ ಇರಕೂಡದು ಎಂದು ಹೇಳಿದರು.

ಮಂಗಳೂರು ವಿ.ವಿ.ಕುಲಪತಿ ಪ್ರೋ| ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಅಧ್ಯಕ್ಷ ಇಳಿಂಜಾಜೆ ಪ್ರಮೋದ್ ಕುಮಾರ್ ರೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎತ್ತಿನಹೊಳೆ ವಿರೋಧಿಸಿ ಕಪ್ಪು ಬಾವುಟ :

ಇದೇ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಎತ್ತಿನಹೊಳೆ ಯೋಜನೆ ಜಾರಿಗೆ ಕಾರಣಕರ್ತರಾದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಘೇರಾವ್ ಹಾಕಲು ಆಗಮಿಸಿದ ಎತ್ತಿನಹೊಳೆ ವಿರೋಧಿ ಹೋರಾಟಗಾರರನ್ನು ಪೊಲೀಸರು ಅರ್ಧದಲ್ಲೇ ಬಂಧಿಸಿದ ಘಟನೆ ನಡೆಯಿತು.

ಆನಂದ ಶೆಟ್ಟಿ ಅಡ್ಯಾರು ನೇತೃತ್ವದಲ್ಲಿ 12ಕ್ಕೂ ಅಧಿಕ ಮಂದಿ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಕಪ್ಪುಬಾವುಟದೊಂದಿಗೆ ಡಿ.ವಿ.ಸದಾನಂದ ಗೌಡರಿಗೆ ಘೆರಾವ್ ಹಾಕಲು ಸಿದ್ಧರಾಗಿ ಆಗಮಿಸಿದಾಗ ಇದನ್ನು ಗಮನಿಸಿದ ಪೊಲೀಸರು, ಅವರನ್ನು ಅರ್ಧದಲ್ಲೇ ತಡೆದು ವಶಕ್ಕೆ ತೆಗೆದುಕೊಂಡರು.

Write A Comment