
ಅಮೃತಸರ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಐವರು ಬಾಲಕಿಯರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಆಸಿಡ್ ಎರಚಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ.
ಆಸಿಡ್ ದಾಳಿಯ ಪರಿಣಾಮ ೧೪ ವರ್ಷ ವಯಸ್ಸಿನ ಬಾಲಕಿಯ ಮುಖ ಮತ್ತು ತೋಳುಗಳು ಶೇ.೧೮ರಷ್ಟು ಸುಟ್ಟಿವೆ. ಮತ್ತೊಬ್ಬ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಅಮೃತಸರದ ಪುರೆವಾಲ್‌ನ ನಿವಾಸಿ ಸಾಜನ್(೧೯) ಎಂದು ಗುರುತಿಸಲಾಗಿದೆ. ಓರ್ವ ಬಾಲಕಿ ತೀವ್ರ ಸ್ವರೂಪದ ಗಾಯಗಳಿಂದ ನರಳುತ್ತಿದ್ದು, ತನ್ನನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾಳೆ.
ಕಳೆದ ೨-೩ ದಿನಗಳಿಂದ ಸಾಜನ್ ಎಂಬಾತ ತನ್ನನ್ನು ಹಿಂಬಾಲಿಸುತ್ತಿದ್ದ. ಈ ವಿಚಾರವನ್ನು ನನ್ನ ಕುಟುಂಬದವರು ಸಾಜನ್‌ನ ತಾಯಿ ಬಳಿ ಪ್ರಶ್ನಿಸಿದ್ದರು. ಈ ಕುರಿತು ಆತನನ್ನು ತರಾಟೆಗೂ ತೆಗೆದುಕೊಳ್ಳಲಾಗಿತ್ತು. ಇದರಿಂದ ಸ್ಥಿಮಿತ ಕಳೆದುಕೊಂಡ ಆತ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಸಾಜನ್ ಕೂಡಾ ಬಾಲಕಿ ಓದುತ್ತಿರುವ ಶಾಲೆಯಲ್ಲೇ ಓದುತ್ತಿದ್ದು, ಕೆಟ್ಟ ನಡವಳಿಕೆಯಿಂದಾಗಿ ಆತನನ್ನು ಹೊರಹಾಕಲಾಗಿತ್ತು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ಪತ್ತೆಗೆ ಶೋಧಕಾರ್ಯ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸಿಡ್ ಪೀಡಿತ ಬಾಲಕಿಯ ಚಿಕಿತ್ಸೆಗೆ ೫೦ ಸಾವಿರ ರೂ. ನೀಡುವಂತೆ ಶಿಕ್ಷಣ ಸಚಿವರು ಸೂಚಿಸಿದ್ದು, ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಬಾಲಕಿಗೆ ನ್ಯಾಯ ದೊರಕಿಸಿಕೊಡುವುದಾಗಿ ಆಕೆಯ ತಂದೆಗೆ ಸಚಿವರು ಭರವಸೆ ನೀಡಿದ್ದಾರೆ.