ಬೆಂಗಳೂರು, ಫೆ.21- ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ , ಇದೇ 27ರಂದು ಬೆಳಗಾವಿಯಲ್ಲಿ ನಡೆಯಲಿರುವ ರೈತ ಸಮಾವೇಶ , ಪದಾಕಾರಿಗಳ ನೇಮಕಾತಿ, ಬಜೆಟ್ ಅದಿವೇಶನದಲ್ಲಿ ಕೈಗೊಳ್ಳಬೇಕಾದ ತಂತ್ರಗಾರಿಕೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಇದೇ 27ರಂದು ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.ಕಳೆದ ಹಲವು ತಿಂಗಳಿನಿಂದ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸಭೆ ನಡೆದಿರಲಿಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ, ಜಿಲ್ಲಾ , ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪ್ರಮುಖರು ತೊಡಗಿಸಿಕೊಂಡಿದ್ದರಿಂದ ಈ ಸಭೆ ನಡೆದಿರಲಿಲ್ಲ.
ಇದೇ ಮೊದಲ ಬಾರಿಗೆ 23ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಕೋರ್ ಕಮಿಟಿ ಸಭೆ ನಡೆಯುತ್ತಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅಕಾರಾವ ಮುಗಿಯುತ್ತಿರುವುದರಿಂದ ತೆರವಾಗಲಿರುವ ಈ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಹಾಲಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖಂಡರಾದ ಆರ್.ಅಶೋಕ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ನಳೀನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್ ಹೆಸರು ಚಾಲ್ತಿಯಲ್ಲಿದೆ.
ಆದರೆ ಯಡಿಯೂರಪ್ಪ ತಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂದು ವರಿಷ್ಠರ ಬಳಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲೇ ಉಳಿಯುವ ಇಂಗಿತವನ್ನು ಈಗಾಗಲೇ ಹೊರ ಹಾಕಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚಿಂತನ-ಮಂಥನ ನಡೆದಿದೆ.ಪಕ್ಷದೊಳಗೆ ಕೆಲವರು ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಒಲವು ಹೊಂದಿದ್ದರೆ ಇನ್ನು ಕೆಲವರು ತಗಾದೆಯನ್ನು ತೆಗೆದಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಶಿವಮೊಗ್ಗ ಮೂಲದ ನಾಯಕರೊಬ್ಬರು ಯಡಿಯೂರಪ್ಪಗೆ ಅಧ್ಯಕ್ಷ ಸ್ಥಾನ ನೀಡಲು ತೊಡರುಗಾಲಾಗಿ ಪರಿಣಮಿಸಿದ್ದಾರೆ.
ಆದರೆ ಪ್ರಸಕ್ತ ರಾಜ್ಯದಲ್ಲಿ ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂಬ ವಾದವನ್ನು ಸಹ ಅವರ ಬೆಂಬಲಿಗರು ಮುಂದಿಟ್ಟಿದ್ದಾರೆ. ಕಾರ್ಯತಂತ್ರ: ಇದೇ 27ರಂದು ಬೆಳಗಾವಿಯಲ್ಲಿ ನಡೆಯಲಿರುವ ರೈತ ಸಮಾವೇಶದ ಬಗ್ಗೆಯೂ ಚರ್ಚೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಮಾವೇಶಕ್ಕೆ ಭಾಗವಹಿಸಲಿದ್ದಾರೆ. ಈ ರೈತ ಸಮಾವೇಶವನ್ನು ಪಕ್ಷದ ಸಂಘಟನೆಗೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಸರಿಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆ ತರಲು ಮುಂದಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದಿಂದ ಭಾರೀ ಸಂಖ್ಯೆಯ ಕಾರ್ಯಕರ್ತರನ್ನು ಕರೆ ತರಲು ಈಗಾಗಲೇ ಪಕ್ಷದ ಮುಖಂಡರು ಸೂಚನೆ ಕೊಟ್ಟಿದ್ದಾರೆ.
ರೈತ ಸಮಾವೇಶ ಬಿಜೆಪಿಯ ಶಕ್ತಿ ಪ್ರದರ್ಶನವೆಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. ಇದರ ಜತೆಗೆ ರಾಜ್ಯಪಾಲರ ಜಂಟಿ ಅವೇಶನ ಹಾಗೂ ಮಾ.18ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದರಲ್ಲಿ ಪ್ರತಿಪಕ್ಷವಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಸದನದಲ್ಲಿ ಯಾವ ರೀತಿಯ ಹೋರಾಟ ನಡೆಸಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು. ಮುಖ್ಯವಾಗಿ ಎರಡು ಕ್ಷೇತ್ರಗಳ ಉಪ ಚುನಾವಣೆ, ಜಿ.ಪಂ, ತಾ.ಪಂ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಲೆ ಬಾಳುವ ವಾಚ್ ವಿವಾದ ಹಾಗೂ ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಲು ಪ್ರಮುಖರು ಕಾರ್ಯತಂತ್ರ ರೂಪಿಸಲಿದ್ದಾರೆ.