ಬೆಂಗಳೂರು, ಫೆ.17- ಕಳಪೆ ಗುಣಮಟ್ಟದ ತಿಂಡಿ, ಊಟ ನೀಡುತ್ತಿರುವ ವಿಕಾಸಸೌಧದ ಕ್ಯಾಂಟಿನ್‌ನಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ದೊರಕಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಸಚಿವಾಲಯದ ನೌಕರರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ವಿಕಾಸಸೌಧದ ಒಂದನೆ ಮಹಡಿಯಲ್ಲಿರುವ ಕ್ಯಾಂಟಿನ್‌ಅನ್ನು ಮುಚ್ಚಿಸಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಅನ್ನದಲ್ಲಿ ಹುಳು, ಇಡ್ಲಿಯಲ್ಲಿ ಜಿರಳೆ, ಬಜ್ಜಿಯಲ್ಲಿ ತಾಮ್ರದ ಉಂಗುರ ಸಿಕ್ಕ ಉದಾಹರಣೆಗಳಿವೆ. ಇಂತಹ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಒದಗಿಸುತ್ತಿರುವ ನಿಸರ್ಗ ಕ್ಯಾಂಟಿನ್‌ನವರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಸಚಿವಾಲಯ ನೌಕರರ ಸಂಘದ ಕಾರ್ಯಕಾರಿ ಸದಸ್ಯ ಗುರುಸ್ವಾಮಿ ಕಳಪೆ ಆಹಾರ ನೀಡುತ್ತಿರುವ ನಿಸರ್ಗ ಕ್ಯಾಂಟಿನ್‌ನ ಗುತ್ತಿಗೆದಾರರನ್ನು ಬದಲಿಸಿ ಉತ್ತಮ ಆಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಕ್ಯಾಂಟಿನ್‌ನಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ. ಪಾತ್ರೆಗಳನ್ನು ಸರಿಯಾಗಿ ತೊಳೆದಿರುವುದಿಲ್ಲ. ಅಡುಗೆಯ ರುಚಿಯೂ ಇರುವುದಿಲ್ಲ. ಹಾಗಾಗಿ ಕೂಡಲೇ ಕ್ಯಾಂಟಿನ್ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.