ಬೆಂಗಳೂರು: ತನ್ನ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಮಂಗಳವಾರ ಹುಟ್ಟು ಹಬ್ಬದ ಶುಭಾಶಯ ಕೋರಿ ಮರಳುತ್ತಿದ್ದಾಗ ಬಿಎಂಟಿಸಿ ಬಸ್ ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ನಾಯಂಡಹಳ್ಳಿ ಮೇಲ್ಸುತವೆ ಬಳಿ ಸಂಭವಿಸಿದ ಅಪಘಾತದಲ್ಲಿ ನಟನ ಅಭಿಮಾನಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಥಣಿಸಂದ್ರದ ನಿವಾಸಿ ಮಧು ಕುಮಾರ್ (22) ಮೃತರು. ಈ ಅವಘಡದಲ್ಲಿ ಗಾಯಗೊಂಡಿರುವ ಮೃತನ ಗೆಳೆಯ ಸುಧಾಂಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಮುಂದಿನ ಕೆಎಸ್ಆರ್ಟಿಸಿ ಬಸ್ ಹಿಂದಿಕ್ಕಲು ಬಿಎಂಟಿಸಿ ಬಸ್ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಬಿಎಂಟಿಸಿ ಚಾಲಕ ನಾಗರಾಜ್ನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಹುಟ್ಟು ಹಬ್ಬದ ಶುಭಕೋರಿ ಬರುತ್ತಿದ್ದರು….
ಮಂಗಳವಾರ ದರ್ಶನ್ ಅವರ 39 ವರ್ಷದ ಹುಟ್ಟ ಸಂಭ್ರಮ. ತನ್ನ ನೆಚ್ಚಿನ ನಟನ ಜನ್ಮ ದಿನದ ಶುಭ ಕೋರಲು ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಮುಂಜಾನೆಯ ಗೆಳೆಯ ಸುಧಾಂಶು ಜತೆ ತೆರಳಿದ್ದ ಮಧುಕುಮಾರ್, ಬಳಿಕ ನಟನನ್ನು ಕಂಡು ಬೆಳಗ್ಗೆ 10.40ರಲ್ಲಿ ಮನೆಗೆ ಮರಳುತ್ತಿದ್ದರು. ಆ ವೇಳೆ ಸಿಟಿ ಮಾರ್ಕೆಟ್ನಿಂದ ಕೆಂಗೇರಿ ತೆರಳುತ್ತಿದ್ದ ಬಿಎಂಟಿಸಿ ಬಸ್ ಚಾಲಕ ನಾಗರಾಜ್, ನಾಯಡಂಹಳ್ಳಿ ಮೇಲ್ಸೇತುವೆಯಲ್ಲಿ ಮುಂದೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಹಿಂದಿಕ್ಕಲು ಆತ ಯತ್ನಿಸಿದ್ದಾನೆ. ಆಗ ಚಾಲಕನ ನಿಯಂತ್ರಣ ತಪ್ಪಿದ ಬಿಎಟಂಸಿ ಬಸ್, ರಸ್ತೆ ವಿಭಜಕ ದಾಟಿ ಹಠತ್ತಾಗಿ ಬಲ ಬದಿಗೆ ಬಂದಿದೆ. ಬಳಿಕ ರಾಜರಾಜೇಶ್ವರಿ ನಗರದಿಂದ ಥಣಿಸಂದ್ರ ಕಡೆಗೆ ತೆರಳುತ್ತಿದ್ದ ಮಧು ಬೈಕ್ಗೆ ಮುಖಾಮುಖಿಯಾಗಿ ಬಸ್ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಸುಧಾಂಶುಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗಾಯಾಳುವನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆ ದಾಖಲಿಸಿದ್ದಾರೆ. ಆತ ಪ್ರಾಣಪಾಯದಿಂದ ಪರಾಗಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೃತ ಮಧುಕುಮಾರ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಥಣಿಸಂದ್ರದಲ್ಲಿ ವಾಸವಾಗಿದ್ದರು. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಉದಯವಾಣಿ