ಕ್ಯಾಲಿಫೋರ್ನಿಯಾ: ‘ಬಿಪಿಎ ಫ್ರೀ ಪ್ಲಾಸ್ಟಿಕ್’ ಖರೀದಿಸಿ ನಾವು ಸೇಫ್ ಎಂದು ಭಾವಿಸುತ್ತಿರುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.
ಬಿಪಿಎ ಬದಲಿಗೆ ಬಿಪಿಎಸ್ ಎಂಬ ಮತ್ತೊಂದು ರಾಸಾಯನಿಕ ರಚನೆಯನ್ನು ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ. ಇಂತಹ ಪ್ಲಾಸ್ಟಿಕ್ಗಳ ಬಳಕೆಯಿಂದ ಭ್ರೂಣದ ಬೆಳವಣಿಗೆಯಲ್ಲಿ ವೇಗ ಕಾಣಿಸಿಕೊಳ್ಳುತ್ತಿದೆ. ಇದು ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಬೇಗನೆ ಪ್ರಾಯಾವಸ್ಥೆಗೆ ತಲುಪುವುದು, ಬೇಗನೆ ಸ್ತನ ಬೆಳವಣಿಗೆಯಾಗುವುದು, ಜನನೇಂದ್ರಿಯಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಇತ್ಯಾದಿ ದೈಹಿಕ ಬೆಳವಣಿಗೆಯಲ್ಲಾಗುತ್ತಿರುವ ಬದಲಾವಣೆಗಳಿಗೆ ಬಿಪಿಎ ಕಾರಣ ಎಂಬುದು ವಿಜ್ಞಾನಿಗಳಿಂದ ತಿಳಿದು ಬಂದಿತ್ತು. ಸುಧಾರಣೆ ಎಂಬಂತೆ ಹೆಚ್ಚಿನ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಿಪಿಎ ಫ್ರೀ ಮಾಡಲಾಗಿತ್ತು. ಆದರೆ ಬಿಪಿಎಸ್ ನಿಂದಲೂ ಅಷ್ಟೇ ಪ್ರಮಾಣದ ಹಾನಿ ಸಂಭವಿಸುತ್ತಿದೆ.
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಲಾಸ್ ಏಂಜಲ್ಸ್ನ ಸಂಶೋಧಕರ ತಂಡ ಸಿದ್ಧಪಡಿಸಿರುವ ಬಿಪಿಎ ಮತ್ತು ಬಿಪಿಎಸ್ನ ದುಷ್ಪರಿಣಾಮಗಳ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಬಿಪಿಎ ಬದಲಿಗೆ ಬಳಸಲಾಗುತ್ತಿರುವ ಬಿಪಿಎಸ್ ಕೂಡ ಅಷ್ಟೇ ಹಾನಿಕರ ಎಂಬುದು ವಿಜ್ಞಾನಿಗಳ ವಾದವಾಗಿದೆ.
ಜೀಬ್ರಾಫಿಶ್ ಮೇಲೆ ಅಧ್ಯಯನ
ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಪಾರದರ್ಶಕದಂತಿರುವ ಜೀಬ್ರಾಫಿಶ್ ಬಳಸಿಕೊಂಡಿದ್ದರು. ಮಾಲಿನ್ಯಯುಕ್ತ ನೀರಿನಲ್ಲಿ ಮೊಟ್ಟೆಗಳು ಬೇಗನೆ ಬೆಳವಣಿಗೆ ಹೊಂದುತ್ತಿರುವುದು, ಅವಧಿಗೂ ಮುನ್ನ ಮರಿಗಳು ಹುಟ್ಟುತ್ತಿರುವುದು ಈ ಅಧ್ಯಯನದಿಂದ ಗೊತ್ತಾಯಿತು. ಕಾರಣ ಮೀನುಗಳು ವಾಸವಿದ್ದ ನೀರಿನಲ್ಲಿ ಬಿಪಿಎ ಅಥವಾ ಬಿಪಿಎಸ್ನ ಅಂಶಗಳಿರುವುದು ಪತ್ತೆಯಾಯಿತು.
ಏನಿದು ಬಿಪಿಎ?
ಬಿಪಿಎ ಎಂದರೆ ‘ಬಿಸ್ಪೋನಲ್ ಎ’ ಎಂಬ ರಾಸಾಯನಿಕ ರಚನೆ. ಗಡುಸಾದ ಮತ್ತು ಅಚ್ಚು ಮಾಡಲು ಅನುಕೂಲಕರವಾದ ಪ್ಲಾಸ್ಟಿಕ್ ಮತ್ತು ಎಪಾಕ್ಸಿ ರಾಸಾಯನಿಕ ರಾಳಗಳಲ್ಲಿ ಬಿಪಿಎ ಕಂಡುಬರುತ್ತದೆ. ಬಿಪಿಎ ಹಾನಿಕಾರಕ ಎಂಬ ಅಂಶವನ್ನು ವಿಜ್ಞಾನಿಗಳು ಬಯಲಿಗೆಳೆಯುತ್ತಿದ್ದಂತೆ ಕಂಪನಿಗಳು ‘ಬಿಪಿಎ ಫ್ರೀ ಪ್ಲಾಸ್ಟಿಕ್’ ಉತ್ಪನ್ನಗಳ ಮೊರೆ ಹೋದರು.
ಏನಿದು ಬಿಪಿಎಸ್?
ಬಿಪಿಎಸ್ ಎಂದರೆ ‘ಬಿಸ್ಪೋನಲ್ ಎಸ್’ ಎಂಬ ರಾಸಾಯನಿಕ ರಚನೆ. ಇತ್ತೀಚೆಗೆ ಹೆಚ್ಚಾಗಿ ಬಿಪಿಎ ಬದಲಿಗೆ ಬಿಪಿಎಸ್ಅನ್ನು ಬಳಸಲಾಗುತ್ತಿದೆ. ಮೆದುಳಿನ ಜೀವಕೋಶಗಳಿಗೆ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿತ ಅಂಗಾಂಗಗಳ ಮೇಲೆ ಬಿಪಿಎಸ್ ನೇರವಾಗಿ ಪರಿಣಾಮ ಬೀರುತ್ತದೆ.