ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ಜನವರಿ ತಿಂಗಳಲ್ಲಿ ನಡೆದ ದಾಳಿ ಬಳಿಕ ಪಶ್ಚಿಮ ವಿಭಾಗದಲ್ಲಿನ ಭಾರತದ ಕನಿಷ್ಠ 20 ಮುಂಚೂಣಿ ವಾಯುಪಡೆ ನೆಲೆಗಳಲ್ಲಿ ನುಸುಳುಕೋರರ ವಿರುದ್ಧ ಕಂಡಲ್ಲಿ ಗುಂಡು ಹಾರಿಸಲು ಆಜ್ಞಾಪಿಸಲಾಗಿದೆ.
ಈ ವಿಚಾರವನ್ನು ಬುಧವಾರ ಇಲ್ಲಿ ತಿಳಿಸಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು 54 ಪ್ರಮುಖ ವಾಯುನೆಲೆಗಳಲ್ಲಿ ಭದ್ರತೆ ಬಲ ಪಡಿಸುವ ಪ್ರಕ್ರಿಯೆಗೆ ಅಂದಾದು 8000 ಕೋಟಿ ರೂಪಾಯಿಗಳ ವೆಚ್ಚ ತಗುಲುತ್ತದೆ ಎಂದೂ ಹೇಳಿದರು.
ಭಾರತೀಯ ವಾಯುಪಡೆ ನೆಲೆಗಳ ಸುತ್ತಮುತ್ತಣ ರಕ್ಷಣಾ ಯೋಜನೆಯಲ್ಲಿ ಸ್ಮಾರ್ಟ್ ಬೇಲಿಗಳ ಅಳವಡಿಕೆ, ವೈಬ್ರೇಷನ್ ಪತ್ತೆ ವ್ಯವಸ್ಥೆ, ಮಿನಿ ಡ್ರೋಣ್ಗಳು ಮತ್ತು ಥರ್ಮಲ್ ಕ್ಯಾಮೆರಾಗಳನ್ನು ವಾಯುಪಡೆ ನೆಲೆಗಳಲ್ಲಿ ಅಳವಡಿಸುವುದು ಸೇರಿದೆ. ತಲಾ 1000 ಸಿಬ್ಬಂದಿಯನ್ನು ಒಳಗೊಂಡ 10 ಹೆಚ್ಚುವರಿ ಗರುಡ ಕಮಾಂಡೋ ತುಕಡಿಗಳನ್ನು ರಾಷ್ಟ್ರಾದ್ಯಂತದ ತನ್ನ 950 ನೆಲೆಗಳ ಸಂರಕ್ಷಣೆಗಾಗಿ ನಿಯೋಜನೆ ಮಾಡುವ ವಿಚಾರವೂ ಯೋಜನೆಯಲ್ಲಿ ಸೇರಿದೆ ಎಂದು ಅವರು ಹೇಳಿದರು.
ಜನವರಿ ತಿಂಗಳಲ್ಲಿ ಪಠಾಣ್ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರಗಾಮಿಗಳು 7 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು. ನಾಲ್ಕು ದಿನಗಳ ಕಾಲ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅವರು ಸಾವನ್ನಪ್ಪಿದ್ದರು.