ಸೋಮಾಲಿಯ: ಆಗಸದಲ್ಲಿ ಹಾರುತ್ತಿದ್ದ ವಾಣಿಜ್ಯ ವಿಮಾನವೊಂದರ ಒಳಗೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿ ವಿಮಾನದ ಒಂದು ಭಾಗದ ಮೇಲ್ಮೈ ಕಿತ್ತು ಹೋದ ಪರಿಣಾಮವಾಗಿ ವಿಮಾನ ತುರ್ತಾಗಿ ಭೂ ಸ್ಪರ್ಶ ಮಾಡಿದ ಘಟನೆ ಘಟಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಉಳಿದೆಲ್ಲ ಪ್ರಯಾಣಿಕರೂ ಪವಾಡಸದೃಶವಾಗಿ ಪಾರಾಗಿದ್ದಾರೆ.
ವಿಮಾನದಲ್ಲಿ ಒಟ್ಟು 74 ಪ್ರಯಾಣಿಕರಿದ್ದರು. ದಾಲ್ಲೂ ಏರ್ಲೈನ್ಸ್ಗೆ ಸೇರಿದ ವಿಮಾನ ಆಫ್ರಿಕಾದ ಜಿಬೌತಿಗೆ ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದಿಂದ ಹೊರಟಿತ್ತು.
ಸ್ಪೋಟದ ಸದ್ದು ಕೇಳಿ ಬಾಂಬ್ ಎಂದು ತಿಳಿದಿದ್ದೆವು ಎಂದು ವಿಮಾನದ ಪೈಲಟ್ ಹಾಗೂ ಪ್ರಯಾಣಿಕರು ಹೇಳಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸದಿದ್ದುದಕ್ಕೆ ಎಲ್ಲರೂ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.