ಕರ್ನಾಟಕ

ಡಿವೈಎಸ್ಪಿ ಎತ್ತಂಗಡಿ ಮಾಡಿಸಿದ್ದು ನಾನೇ; ಸಿಕ್ಕಿಬಿದ್ದ ಸಚಿವ ನಾಯ್ಕ್!

Pinterest LinkedIn Tumblr

55_0ಬಳ್ಳಾರಿ : ಕರೆ ಸ್ವೀಕರಿಸಿಲ್ಲ ಎಂಬ ಸಣ್ಣ ಕಾರಣಕ್ಕೆ ಕೂಡ್ಲಗಿ ಉಪವಿಭಾಗದ  ಡಿವೈಎಸ್‌ಪಿ ಅನುಪಮಾ ಶಣೈ ಅವರನ್ನು ನಾನು ವರ್ಗಾವಣೆ ಮಾಡಿಸಿಲ್ಲ ,ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ವಿವಾದಕ್ಕೆ ಅಂತ್ಯ ಹಾಡಲು ಯತ್ನಿಸಿದ್ದ ಕಾರ್ಮಿಕ ಸಚಿವ ಪರಮೇಶ್ವರ್‌ ನಾಯ್ಕ್ ಅವರು ಇದೀಗ ಕಾರ್ಯಕರ್ತರೆದುರು ಜಂಬ ಕೊಚ್ಚಿಕೊಂಡು ಸಿಕ್ಕಿ ಹಾಕಿಕೊಂಡಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡುವ ವೇಳೆ ಬಡಾಯಿ ಕೊಚ್ಚಿಕೊಂಡ ಸಚಿವರು  ‘ಕೊಲೆ ಪ್ರಕರಣವೊಂದು ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಿವರಿಸಲು ಆಕೆಗೆ(ಡಿವೈಎಸ್‌ಪಿ ಅನುಪಮಾ) ಕರೆ ಮಾಡಿದ್ದೆ ,ಆದರೆ ಆಕೆ ಕರೆ ಸ್ವೀಕರಿಸಿ ಕೇವಲ 42 ಸೆಕೆಂಡ್‌ ಮಾತ್ರ ಮಾತನಾಡಿದಳು , ಇನ್ನೊಮ್ಮೆ ಕರೆ ಮಾಡಿದೆ.. ಆಕೆ ಸ್ವೀಕರಿಸಲಿಲ್ಲ .ಇದರಿಂದ ಸಿಟ್ಟಾಗಿ ನಾನೇ ಎತ್ತಂಗಡಿ ಮಾಡಿಸಿಬಿಟ್ಟೆ’ ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ಅಲ್ಲದೆ ‘ನನಗೆ ಅಧಿಕಾರಿಗಳು ಮುಖ್ಯವಲ್ಲ ,ನಿವೇ ಮುಖ್ಯ ,ಯಾವತ್ತೂ ನಾನು ಅಧಿಕಾರಿಗಳು ಹೇಳಿದಂತೆ ಕೆಲಸ ಮಾಡಿಲ್ಲ .ಯಾರಿಗೆ ಗೌರವ ಪಡೆಯಬೇಕು ಎಂದಿರುತ್ತದೋ ಅಂತಹವರು ಗೌರವ ನೀಡಲೂ ಕಲಿಯಬೇಕು’ ಎಂದರು.

‘ಜಿಲ್ಲಾ ಮಂತ್ರಿಗಳ ಫೋನ್‌ ಸ್ವೀಕರಿಸುತ್ತಿಲ್ಲ ಅಂದರೆ ಯಾಕೆ ಇಟ್ಟುಕೊಳ್ಳಬೇಕು …ಪೊಲೀಸರು ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ದುಡ್ಡು  ತಿಂದ್ರು.. ಅದಕ್ಕಾಗಿ ವರ್ಗಾವಣೆ ಮಾಡಿಸಿದೆ..ನಾನು ನಿಮ್ಮ ಹತ್ರ ಈ ವಿಚಾರ ಮನಸ್ಸು ಬಿಚ್ಚಿ ಹೇಳುತ್ತಿದ್ದೇನೆ’ ಎಂದು ಸಚಿವ ನಾಯ್ಕ್ ಹೇಳಿದರು.

ಇದೆಲ್ಲವನ್ನು ಸ್ಥಳದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಮೊಬೈಲ್‌ನಲ್ಲಿ ಗುಟ್ಟಾಗಿ ಚಿತ್ರಿಸಿ ಮಾದ್ಯಮಗಳಿಗೆ ನೀಡಿದ್ದಾನೆ.

ಕ್ಲುಲ್ಲಕ ಕಾರಣಕ್ಕೆ ದಕ್ಷ ಅಧಿಕಾರಿಣಿಯ ವರ್ಗಾವಣೆ ಮಾಡಿದುದನ್ನು ವಿರೋಧಿಸಿ ಸಚಿವ ಪರಮೇಶ್ವರ್‌ ನಾಯ್ಕ ವಿರುದ್ದ ಬಳ್ಳಾರಿಯಲ್ಲಿ ಹಲವು ಸಂಘಟನೆಗಳು ಪ್ರತಿಭಟನೆಗಳು ನಡೆದಿದ್ದವು .

ವಿವಾದದ ಕುರಿತಾಗಿ ಜನವರಿ 21 ರಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು  ‘ನಾನು ಕರೆ ಸ್ವೀಕರಿಸಿಲ್ಲ ಎಂಬ ಸಣ್ಣ ಕಾರಣಕ್ಕೆ ಡಿವೈಎಸ್‌ಪಿ ಅನುಪಮಾ ಶಣೈ ಅವರನ್ನು  ವರ್ಗಾವಣೆ ಮಾಡಿಸಿಲ್ಲ.ಇಂತಹ ಸಣ್ಣ ಕೆಲಸ ಮಾಡುವವ ನಾನಲ್ಲ..ಇದು ಸಾಬೀತಾದರೆ ನಾನು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಇದು ಸುಳ್ಳು ಆರೋಪ’ ಎಂದಿದ್ದರು.

ಕರೆ ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶಣೈ ಅವರನ್ನು ಪರಮೇಶ್ವರ್‌ ನಾಯ್ಕ್ ಅವರು ವರ್ಗಾವಣೆ ಮಾಡಿದ್ದಾರೆ ಎನ್ನುವುದಾಗಿ ಮಾದ್ಯಮಗಳಲ್ಲಿ ಸುದ್ದಿ ಬಿತ್ತರವಾಗಿ ಹೊಸ ವಿವಾದ ಸಚಿವರನ್ನು ಸುತ್ತಿಕೊಂಡಿತ್ತು.

ಜನವರಿ 18 ರಂದು ಸಚಿವರ ಬೆಂಬಲಿಗನೊಬ್ಬರು ಡಿವೈಎಸ್‌ಪಿ ಅನುಪಮಾ ಶಣೈ ಅವರಿಗೆ ಕರೆ ಮಾಡಿ ಸಚಿವರು ನಿಮ್ಮ ಬಳಿ ಮಾತನಾಡುತ್ತಾರೆ ಎಂದಿದ್ದರು. ಈ ವೇಳೆ ಸಚಿವರೊಂದಿಗೆ ಮಾತನಾಡದೆ ಎಸ್‌ ಪಿ ಚೇತನ್‌ ಅವರ ಕರೆ ಸ್ವೀಕರಿಸಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.

ಇದೇ ಕಾರಣಕ್ಕಾಗಿ ಆಕ್ರೋಶಗೊಂಡ ಪರಮೇಶ್ವರ್‌ ನಾಯ್ಕ್  ಅವರು  ತಮ್ಮ ಪ್ರಭಾವ ಬಳಸಿ ಗೃಹ ಸಚಿವರ ಮುಖೇನ ಡಿವೈಎಸ್‌ಪಿ ಅವರನ್ನು ಇಂಡಿಗೆ ವರ್ಗಾವಣೆ ಮಾಡಿದ್ದರು.

ಇದೀಗಸಚಿವರು ತಾವೇ ವರ್ಗಾವಣೆ ಮಾಡಿಸಿದೆ ಎಂದು ಹೇಳಿಕೊಂಡಿರುವುದರಿಂದ ವಿವಾದ ಇನ್ನಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
-ಉದಯವಾಣಿ

Write A Comment