ಕರ್ನಾಟಕ

ರಾಜ್ಯದಲ್ಲಿ 1.6 ಲಕ್ಷ ಜನರಿಗೆ “ಧರ್ಮವಿಲ್ಲ’!

Pinterest LinkedIn Tumblr

census-prov-illus4ಬೆಂಗಳೂರು: ಬಸವಾದಿ ಶರಣರ ಬೀಡು, ಸೂಫಿ-ಸಂತರ ನಾಡು, ಆಚಾರ್ಯತ್ರಯರ ಸನಾತನ ಪರಂಪರೆಯ ಮೂಲಕ ಪ್ರಬಲ ಆಧ್ಯಾತ್ಮಿಕ ನೆಲೆಗಟ್ಟು ಹೊಂದಿರುವ ಕರ್ನಾಟಕದಲ್ಲಿ ಯಾವ ಧರ್ಮಕ್ಕೂ ಸೇರದೆ ಇರುವವರು ಇದ್ದಾರೆ ಮತ್ತು ಅವರ ಸಂಖ್ಯೆ 1.66 ಲಕ್ಷ. 2011ರ ಜನಗಣತಿ ಪ್ರಕಾರ ಕೇಂದ್ರ ಸರ್ಕಾರದ ಪ್ರಧಾನ ನೋಂದಣಾಧಿಕಾರಿ ಮತ್ತು ಗಣತಿ ಆಯುಕ್ತರ ಕಚೇರಿ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 1.66 ಲಕ್ಷ ಮಂದಿ ಧರ್ಮದ ಕಾಲಂನಲ್ಲಿ ಯಾವುದೇ ಧರ್ಮವನ್ನು ಗುರುತು ಹಾಕದಿರುವ ಮೂಲಕ ಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿಲ್ಲ.

ಜಾತಿ ಹಾಗೂ ಧಾರ್ಮಿಕ ವಿಚಾರ ಮತ್ತು ನಂಬಿಕೆಗಳನ್ನು ಮುಂದಿಟ್ಟುಕೊಂಡು ಸಹಿಷ್ಣತೆ ಮತ್ತು ಅಸಹಿಷ್ಣತೆ ಕುರಿತ ಚರ್ಚೆ ವ್ಯಾಪಕವಾಗಿರುವಾಗ ಧರ್ಮದೊಂದಿಗೆ ಗುರುತಿಸಿಕೊಳ್ಳದಿರುವವರೂ ಇದ್ದಾರೆ ಮತ್ತು ವಿಶೇಷವೆಂದರೆ ಈ ರೀತಿ ಧರ್ಮ ಹೇಳಿಕೊಳ್ಳದವರ ಪೈಕಿ ಅತಿ ಹೆಚ್ಚಿನ
ಸಂಖ್ಯೆಯಲ್ಲಿರುವವರು ಮಹಿಳೆಯರು.

ಕೇಂದ್ರ ಸರ್ಕಾರದ ಮಾಹಿತಿಯಂತೆ 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಇದೆ. ಅದರಲ್ಲಿ 5.13 ಕೋಟಿ ಹಿಂದೂಗಳು, 78.93 ಲಕ್ಷ ಮುಸ್ಲಿಮರು, 11.42 ಲಕ್ಷ ಕ್ರೈಸ್ತರು, 28 ಸಾವಿರ ಸಿಖVರು, 95 ಸಾವಿರ ಬೌದಟಛಿರು, 4.40 ಲಕ್ಷ ಜೈನರು ಇದ್ದಾರೆ. ಜೊತೆಗೆ ಇತರೆ ಧರ್ಮ ಮತ್ತು ನಂಬಿಕೆಗಳನ್ನು ಆಚರಿಸುವವರು 11 ಸಾವಿರ ಮಂದಿ ಇದ್ದಾರೆ ಮತ್ತು 1.66 ಲಕ್ಷ ಮಂದಿ ಯಾವುದೇ
ಧರ್ಮದ ಪರಿಪಾಲಕರಲ್ಲ.

ರಾಜ್ಯದಲ್ಲಿ “ಧರ್ಮ’ ಇಲ್ಲದ 1.66 ಲಕ್ಷ ಮಂದಿಯಲ್ಲಿ 81 ಸಾವಿರ ಪುರುಷರು ಇದ್ದರೆ, 84 ಸಾವಿರ ಮಹಿಳೆಯರು ಇದ್ದಾರೆ. ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳದವರ ಸಂಖ್ಯೆ ರಾಜ್ಯದ ಗ್ರಾಮೀಣ ಭಾಗದಲ್ಲಿ 68 ಸಾವಿರ ಇದ್ದರೆ, ನಗರ ಪ್ರದೇಶದಲ್ಲಿ 97 ಸಾವಿರ ಇದೆ. ವಿಶೇಷ ಎಂದರೆ ಧರ್ಮದೊಂದಿಗೆ ಗುರುತಿಸಿಕೊಳ್ಳದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಧರ್ಮದಿಂದ ದೂರ ಉಳಿದ ಪುರುಷರು ಮತ್ತು ಮಹಿಳೆಯರ ಸಂಖ್ಯೆ ತಲಾ 34 ಸಾವಿರ ಇದೆ.

ಅದೇ ರೀತಿ ನಗರ ಪ್ರದೇಶಗಳಲ್ಲಿ 46 ಸಾವಿರ ಪುರುಷರು ಮತ್ತು 50 ಸಾವಿರ ಮಹಿಳೆಯರು ಧರ್ಮದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಲ್ಲದೇ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳದ ಒಟ್ಟು ಮಂದಿಯ ಪೈಕಿ 1.08 ಲಕ್ಷ ಮಂದಿ ವಿದ್ಯಾವಂತರು ಹಾಗೂ 57 ಸಾವಿರ ಮಂದಿ ಅವಿದ್ಯಾವಂತರಿದ್ದಾರೆ. ಒಟ್ಟು
ವಿದ್ಯಾವಂತರಲ್ಲಿ 57 ಸಾವಿರ ಪುರುಷರು ಹಾಗೂ 51 ಸಾವಿರ ಮಹಿಳೆಯರು ಇದ್ದಾರೆ. 57 ಸಾವಿರ ಅವಿದ್ಯಾವಂತರ ಪೈಕಿ 24 ಸಾವಿರ ಪುರುಷರು, 33 ಸಾವಿರ ಮಹಿಳೆಯರು ಇದ್ದಾರೆ. ಅದೇ ರೀತಿ 5 ಸಾವಿರ ಮಂದಿ ಸಾಂಪ್ರದಾಯಿಕ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದಟಛಿ ಮತ್ತು ಜೈನ ಧರ್ಮಗಳನ್ನು ಬಿಟ್ಟು ಇತರೆ ಧರ್ಮ ಮತ್ತು ನಂಬಿಕೆಗಳನ್ನು ಪಾಲಿಸುವವರೂ ಇದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ ಅತಿ ಹೆಚ್ಚಿನ ಜನ: ಧರ್ಮದಿಂದ ದೂರ ಉಳಿದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬಿಬಿಎಂಪಿ ವ್ಯಾಪ್ತಿ, ಕಲಬುರ್ಗಿ, ಬೆಳಗಾವಿ, ಬೀದರ್‌ ಜಿಲ್ಲೆಗಳಲ್ಲಿ ಇದ್ದಾರೆ. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡುಗು
ಜಿಲ್ಲೆಗಳಲ್ಲಿ ಧರ್ಮ ನಂಬದವರ ಸಂಖ್ಯೆ ಕಡಿಮೆ ಇದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 40 ಸಾವಿರ, ಬಿಬಿಎಂಪಿ ವ್ಯಾಪ್ತಿಯಲ್ಲಿ 37 ಸಾವಿರ, ಕಲಬುರಗಿ 18 ಸಾವಿರ, ಬೆಳಗಾವಿ 12 ಸಾವಿರ ಹಾಗೂ ಬೀದರ್‌ ಜಿಲ್ಲೆಯಲ್ಲಿ 10 ಸಾವಿರ ಜನ ಧರ್ಮದಿಂದ ದೂರ ಉಳಿದಿದ್ದಾರೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿ 394, ಉಡುಪಿಯಲ್ಲಿ 552, ಉತ್ತರ ಕನ್ನಡದಲ್ಲಿ 562 ಹಾಗೂ ದಕ್ಷಿಣ ಕನ್ನಡ 996 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 1168 ಜನ ಯಾವುದೇ ಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿಲ್ಲ.

ಉಳಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ 5,880, ವಿಜಯಪುರದಲ್ಲಿ 8,384, ರಾಯಚೂರಿನಲ್ಲಿ 5,346, ಕೊಪ್ಪಳದಲ್ಲಿ 2,305, ಗದಗದಲ್ಲಿ 3,346, ಧಾರವಾಡದಲ್ಲಿ 7,436, ಹಾವೇರಿಯಲ್ಲಿ 4,434, ಬಳ್ಳಾರಿಯಲ್ಲಿ 4,703, ಚಿತ್ರದುರ್ಗದಲ್ಲಿ 2,665, ದಾವಣಗೆರೆಯಲ್ಲಿ 7,176, ಶಿವಮೊಗ್ಗದಲ್ಲಿ 2,023, ತುಮಕೂರಿನಲ್ಲಿ 4,223, ಮಂಡ್ಯದಲ್ಲಿ 2,430, ಹಾಸನದಲ್ಲಿ 3,250. ಮೈಸೂರಿನಲ್ಲಿ 6,871, ಚಾಮರಾಜನಗರದಲ್ಲಿ 3,418, ಯಾದಗಿರಿಯಲ್ಲಿ 1,386, ಚಿಕ್ಕಬಳ್ಳಾಪುರದಲ್ಲಿ 1,078, ಬೆಂಗಳೂರು ಗ್ರಾಮಾಂತರದಲ್ಲಿ 1,083, ರಾಮನಗರ ಜಿಲ್ಲೆಯಲ್ಲಿ 1,272 ಮಂದಿ ಧರ್ಮವನ್ನು ಹೇಳಿಕೊಂಡಿಲ್ಲ.
ರಫೀಕ್‌ ಅಹ್ಮದ್‌
-ಉದಯವಾಣಿ

Write A Comment