ತುಮಕೂರು, ಡಿ.3: ತಮಿಳುನಾಡಿನ ದೇವಸ್ಥಾನಕ್ಕೆಂದು ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದವರಿಗೆ ಕ್ಯಾಂಟರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 206ರ ಸಿದ್ಧಾರ್ಥ ನಗರ ಬಳಿ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ನಿವಾಸಿಗಳಾದ ಸರೋಜಮ್ಮ (65), ತಿರುವಣಕರ್ (54) ಮೃತಪಟ್ಟ ನತದೃಷ್ಟರು. ಬೆಂಗಳೂರಿನವರಾದ ಸರಳ, ಮಾಧುರಿ, ಜಯಂತ್, ಕೀರ್ತಿಕೊಪ್ಪ ಎಂಬುವರ ಸ್ಥಿತಿ ಚಿಂತಾಜನಕವಾಗಿದ್ದಾರೆ. ಕಾರು ಚಾಲಕ ಅವಿನಾಶ್, ಕ್ಯಾಂಟರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಸರಳ ಮತ್ತು ಮಾಧುರಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ಗೆ, ಜಯಂತ್, ಕೀರ್ತಿಕೊಪ್ಪ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕರಿಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನವರಾದ ಸರಳ, ಮಾಧುರಿ, ಜಯಂತ್, ಕೀರ್ತಿಕೊಪ್ಪ ಅವರುಗಳು ಸಂಬಂಧಿಕರಾದ ಭದ್ರಾವತಿ ನಿವಾಸಿ ಸರೋಜಮ್ಮ ಅವರ ಮನೆಗೆ ತೆರಳಿದ್ದು, ಅಲ್ಲಿಂದ ಎಲ್ಲರೂ ತಮಿಳುನಾಡಿನ ದೇವಸ್ಥಾನಕ್ಕೆ ಕಾರಿನಲ್ಲಿ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೊಗ್ಗದಿಂದ ತಮಿಳುನಾಡಿಗೆ ಹೋಗುತ್ತಿದ್ದ ಕಾರು ಮಲ್ಲಸಂದ್ರ-ಹೆಗ್ಗೆರೆ ನಡುವಿನ ಸಿದ್ಧಾರ್ಥನಗರದ ಬಳಿ ಮುಂಜಾನೆ 5.30ರಲ್ಲಿ ಬರುವಾಗ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸರೋಜಮ್ಮ ಸ್ಥಳದಲ್ಲೇ ಸಾವನ್ನಪ್ಪಿದರೆ ತಿರುವಣಕರ್ ಆಸ್ಪತ್ರೆ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಅತಿವೇಗವಾಗಿ ಬರುತ್ತಿದ್ದ ಕ್ಯಾಂಟರ್ ಚಾಲಕ ನಿದ್ದೆ ಮಂಪರಿನಲ್ಲಿ ಅಪಘಾತ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.n ಸ್ಥಳಕ್ಕೆ ಡಿವೈಎಸ್ಪಿ ವಿಜಯ್ಕುಮಾರ್, ಗ್ರಾಮಾಂತರ ಪ್ರಭಾರ ಸಿಪಿಐ ಕುಮಾರಪ್ಪ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಾರ್ಯ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
