ಬೆಂಗಳೂರು, ನ.30: ಸರಕು ಸಾಗಣೆ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗೌರ್ನರ್) ಅಳವಡಿಸುವ ಸಂಬಂಧ ರಾಜ್ಯದ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಲಾರಿ ಮಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರಕಾರ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಣ ಅಳವಡಿಕೆಗೆ 2016ರ ಎಪ್ರಿಲ್ 1ರ ಗಡುವು ನೀಡಿ ಆದೇಶ ಹೊರಡಿಸಿದೆ.
ತಾತ್ಕಾಲಿಕ ವಾಪಸ್
ಆದರೆ, ಈ ಮಧ್ಯೆ ವೇಗ ನಿಯಂತ್ರಕ ಅಳವಡಿಸುವ ಸಂಬಂಧ ಹೈಕೋರ್ಟ್ನಲ್ಲಿ ನಂಜಪ್ಪ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ವೇಗ ನಿಯಂತ್ರಕ ಅಳವಡಿಸಲು ಆದೇಶ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಸ್ಪಷ್ಟನೆ ನೀಡಿದರು.
ವೇಗ ನಿಯಂತ್ರಕ ಅಳವಡಿಸುವ ಸಂಬಂಧ ಎರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ 2015ರ ಡಿ.1ರಿಂದ ಲಾರಿ ಮಾಲಕರ ಸಂಘ ಕೈಗೊಳ್ಳಲು ಉದ್ದೇಶಿಸಿದ ಅನಿರ್ಧಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಟೆಂಡರ್ ಪರಿಶೀಲನೆ: ಎರಡು ಕಂಪೆನಿಗಳ ‘ವೇಗ ನಿಯಂತ್ರಕ’ ಸಾಧನ ಉತ್ತಮ ಗುಣಮಟ್ಟದೆಂಬುದು ಪರಿಶೀಲನೆಯಿಂದ ಖಚಿತವಾಗಿದೆ. ಆ ಹಿನ್ನೆಲೆಯಲ್ಲಿ ಆ ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ವೇಗ ನಿಯಂತ್ರಕ ದೊರಕಿಸಿಕೊಡಲು ಪರಿಶೀಲನೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
***
‘ಬೇರೆ ಯಾವುದೇ ರಾಜ್ಯದಲ್ಲಿಲ್ಲದ ಆದೇಶ ಕರ್ನಾಟಕದಲ್ಲಿದ್ದು, ಅರ್ಹತಾ ಪ್ರಮಾಣಪತ್ರ ಇಲ್ಲದೆ 30 ಸಾವಿರಕ್ಕೂ ಹೆಚ್ಚು ಸಾರಿಗೆ ವಾಹನಗಳು ಸ್ಥಗಿತಗೊಂಡಿವೆ. ಆದುದರಿಂದ ರಾಜ್ಯ ಸರಕಾರ ಹೈಕೋರ್ಟ್ನಲ್ಲಿ ಕಾಲಾವಕಾಶ ಕೋರಬೇಕು. ಅಲ್ಲದೆ, ಸ್ಪರ್ಧಾತ್ಮಕ ದರದಲ್ಲಿ ‘ವೇಗ ನಿಯಂತ್ರಕ ಸಾಧನ’ ದೊರಕಿಸಿಕೊಡಬೇಕು. ವೇಗ ನಿಯಂತ್ರಕ ಅಳವಡಿಕೆ ಸಂಬಂಧ ಕೇಂದ್ರದ ವಿರುದ್ಧ ನಮ್ಮ ಹೋರಾಟ ನಿಲ್ಲದು. ’
-ಜಿ.ಆರ್.ಷಣ್ಮುಗಪ್ಪ ಲಾರಿ ಮಾಲಕರ ಸಂಘದ ಅಧ್ಯಕ್ಷ
***
‘ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲು ಬದ್ಧ. ಸ್ಪರ್ಧಾತ್ಮಕ ಬೆಲೆಯಲ್ಲಿ ವೇಗ ನಿಯಂತ್ರಕ ಸಾಧನವನ್ನು ದೊರಕಿಸಿಕೊಡಲು ಸರಕಾರ ಕ್ರಮ ವಹಿಸಬೇಕು. ಗುಣಮಟ್ಟದ ನೆಪದಲ್ಲಿ ಕೇವಲ ಎರಡೇ ಕಂಪೆನಿಗಳಿಗೆ ವೇಗ ನಿಯಂತ್ರಕ ಸಾಧನಕ್ಕೆ ಶಿಫಾರಸು ಮಾಡಿರುವುದು ವಾಹನ ಮಾಲಕರಿಗೆ ತೊಂದರೆಯಾಗಲಿದೆ’
-ಚೆನ್ನಾರೆಡ್ಡಿ, ಲಾರಿ ಮಾಲಕರ ಸಂಘದ ಅಧ್ಯಕ್ಷ