ಬೆಂಗಳೂರು,ನ.30: ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆದಾರರ ಸೇವಾ ಜ್ಯೆಷ್ಠತೆಯನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ 179ಕೋಟಿ ರೂ.ಬಿಲ್ ಪಾವತಿಸಿದ ಬಿಬಿಎಂಪಿ ಲೆಕ್ಕಾಧಿಕಾರಿ ಯನ್ನು ಕೂಡಲೇ ಅಮಾನತು ಮಾಡಬೇಕೆಂದು ಪಾಲಿಕೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ಸೋಮವಾರ ಬಿಬಿಎಂಪಿ ಸಭೆ ಮುಂದೂಡಿದ ಬಳಿಕ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, 2013ರಿಂದ ಲೂ ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ. ಆದರೂ ಆನ್ಲೈನ್ ನಲ್ಲಿ ಕಾಮಗಾರಿ ಮೊತ್ತ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಈ ಮಧ್ಯೆ ರಾಜ ರಾಜೇಶ್ವರಿ ನಗರ, ಯಶ ವಂತಪುರ ಹಾಗೂ ಕೆಆರ್ಪುರ ಕ್ಷೇತ್ರಗಳಿಗೆ 2015ನೆ ಸಾಲಿನ ಕಾಮಗಾರಿಯ 179 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ದೂರಿದರು.
ಸಚಿವರಿಂದ ಶೇ.8-9ರಷ್ಟು ಕಮಿಷನ್ ಪಡೆದು ಬಿಲ್ ಪಾವತಿಸಲಾಗಿದೆ. ರಾಜರಾಜೇಶ್ವರಿ ನಗರಕ್ಕೆ 15 ಕೋಟಿ ರೂ., ಯಶವಂತಪುರಕ್ಕೆ 30 ಕೋಟಿ ರೂ.ಹಾಗೂ ಉಳಿದ ಹಣವನ್ನು ಕೆಆರ್ ಪುರ ಕ್ಷೇತ್ರಕ್ಕೆ ಬಿಡು ಗಡೆ ಮಾಡಲಾಗಿದೆ ಎಂದು ದೂರಿದ ಅವರು, ಈ ಅವ್ಯವ ಹಾರ ಸಂಬಂಧ ಸೂಕ್ತ ತನಿಖೆ ಆಗಬೇಕು ಎಂದರು.
ಆಡಳಿತದಲ್ಲಿ ಪಾರದರ್ಶಕತೆ ಎಂದು ಹೇಳುತ್ತಲೇ ಆನ್ಲೈನ್ ಮೂಲಕ ಹಣ ಬಿಡುಗಡೆ ವ್ಯವಸ್ಥೆ ಜಾರಿಗೆ ತಂದಿದ್ದರೂ, ಆನ್ಲೈನ್ ವಾಸ್ತವದಲ್ಲಿ ಫ್ರೀ ಲೈನ್ ಆಗಿದೆ ಎಂದು ಟೀಕಿಸಿದ ಅವರು, 2015ರ ಮಾರ್ಚ್13ರಂದು ಪಾಲಿಕೆ ನೀಡಿದ್ದ 19.94 ಕೋಟಿ ರೂ.ಚೆಕ್ ಬೌನ್ಸ್ ಆಗಿದ್ದು, ಆ ಮೊತ್ತವನ್ನೇ ಇನ್ನು ಮರು ಪಾವತಿಸಿ ಲ್ಲ. ಈ ಮಧ್ಯೆಯೇ ಆಡಳಿತ ಪಕ್ಷದ ಶಾಸಕರ ಕ್ಷೇತ್ರ ಗಳಿಗೆ 179 ಕೋಟಿ ರೂ. ಬಿಡುಗಡೆ ಮಾಡಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಬಿಲ್ ಪಾವತಿ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕು ಎಂದು ಅವರು ಕೋರಿದರು.
ಕಾನೂನು ಹೋರಾಟದ ಎಚ್ಚರಿಕೆ
ಪಾಲಿಕೆ ನಿಯಮಗಳನ್ನು ಗಾಳಿಗೆ ತೂರಿ ಬಿಲ್ ಪಾವತಿಸಿದ ಬಿಬಿಎಂಪಿ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬಿಜೆಪಿಯಿಂದ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
ಸೇವಾ ಜ್ಯೆಷ್ಠತೆಯನ್ನು ಪರಿಗಣಿಸದೆ ಬಿಲ್ ಪಾವತಿಯನ್ನು ವಿರೋಧಿಸಿ ಗುತ್ತಿಗೆದಾರರು ಪಾಲಿಕೆ ಕೇಂದ್ರ ಕಚೇರಿ ಮುಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ವಿವಿಧ ಕಾಮಗಾರಿಗಳ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
