ಬೆಂಗಳೂರು, ನ.28: ಮೇಲ್ಮನೆ ಚುನಾವಣೆ ಯಲ್ಲಿ ತಾನು ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಬದಲಿಗೆ ಪಕ್ಷದಿಂದ ಆಯ್ಕೆ ಮಾಡುವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವೆ ಎಂದು ಮಾಜಿ ಸಂಸದೆ, ನಟಿ ರಮ್ಯಾ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಪರಿಷತ್ ಚುನಾವಣೆಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ಮನೆ ಚುನಾವಣೆಯಲ್ಲಿ ತಾನು ಆಂಕಾಕ್ಷಿಯಲ್ಲ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಮಗೆ ಮುಖ್ಯ ಎಂದು ಹೇಳಿದರು.
ಮೇಲ್ಮನೆ ಚುನಾವಣೆ ಸ್ಪರ್ಧೆಗೆ ತಾನು ಆಕಾಂಕ್ಷಿಯಲ್ಲ. ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅನಗತ್ಯ ಗೊಂದಲ ಸೃಷ್ಟಿ ಬೇಡ ಎಂದ ರಮ್ಯಾ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು.