ಕರ್ನಾಟಕ

ನಡುರಸ್ತೆಯಲ್ಲೇ ಸುರಕ್ಷಿತ ಹೆರಿಗೆಗೆ ನೆರವಾದ ಎಸ್‌ಐಗೆ ಗೃಹ ಸಚಿವರ ಅಭಿನಂದನೆ

Pinterest LinkedIn Tumblr

Gopala Krishna traffic police

ಬೆಂಗಳೂರು, ನ.21: ಬ್ಯಾಟರಾಯನಪುರ ಸಂಚಾರ ಠಾಣೆಯ ಕರ್ತವ್ಯ ನಿರತ ಸಬ್‌ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಅವರು ಹೆರಿಗೆ ನೋವು ಕಾಣಿಸಿಕೊಂಡು ರಸ್ತೆಯಲ್ಲಿ ಕುಸಿದ ಗರ್ಭಿಣಿಗೆ ರಸ್ತೆ ಬದಿಯಲ್ಲೇ ವ್ಯವಸ್ಥೆ ಮಾಡಿ ತಾಯಿ-ಮಗು ಇಬ್ಬರಿಗೂ ಮರು ಜನ್ಮ ನೀಡಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶ್ಲಾಘಿಸಿದ್ದಾರೆ.

ಇಂದು ಬೆಳಗ್ಗೆ ಗೋಪಾಲಕೃಷ್ಣ ಅವರಿಗೆ ತಾವೇ ಖುದ್ದು ದೂರವಾಣಿ ಕರೆ ಮಾಡಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಅವರು, ತಮ್ಮ ಕೆಲಸ ಇತರರಿಗೆ ಮಾರ್ಗದರ್ಶನವಾಗಬೇಕು. ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಸಕಾಲದಲ್ಲಿ ತಾವು ಮಾಡಿರುವ ಕೆಲಸ ತಾಯಿ-ಮಗುವಿನ ಜೀವ ಉಳಿಸಿದೆ ಅಲ್ಲದೆ, ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತಂದಿದೆ. ಅದಕ್ಕಾಗಿ ವೈಯಕ್ತಿಕವಾಗಿ ಹಾಗೂ ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಇಂತಹ ಕೆಲಸಗಳನ್ನು ಮಾಡುವ ಮೂಲಕ ಇಲಾಖೆಯ ಘನತೆ-ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಪರಮೇಶ್ವರ್ ಅವರು ತಿಳಿಸಿದ್ದಾರೆ.ಗೋಪಾಲಕೃಷ್ಣ ಅವರು ನಿನ್ನೆ ಗರ್ಭಿಣಿ ಸೆಲ್ವಿ (23) ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಮೇಲ್ಸೇತುವೆಯಲ್ಲಿ ಬೆಳಗ್ಗೆ 8.15ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸೆಲ್ವಿ ಅವರನ್ನು ಪಕ್ಕದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಗಮನಿಸಿ ತಕ್ಷಣ ನೆರವಿಗೆ ಧಾವಿಸಿದರು. ಮೇಲ್ಸೇತುವೆ ರಸ್ತೆಯ ಪಕ್ಕಕ್ಕೆ ಕರೆದುಕೊಂಡು ಹೋಗು ಕೂರಿಸಿ, ಆಂಬುಲೆನ್ಸ್‌ಗೆ ಕರೆ ಮಾಡಿದರು.

ಆದರೆ ಅಷ್ಟೊತ್ತಿಗಾಗಲೇ ಹೆರಿಗೆ ನೋವು ಹೆಚ್ಚಾಗಿತ್ತು. ಮುನ್ಸೂಚನೆ ಅರಿತ ಗೋಪಾಲಕೃಷ್ಣ ಅವರು ದೂರದಲ್ಲಿದ್ದ ಪೌರಕಾರ್ಮಿಕ ಮಹಿಳೆಯರನ್ನು ಕರೆದು ನೋಡುವಂತೆ ಹೇಳಿದರಲ್ಲದೆ, ಕೆಲ ಸೀರೆಗಳನ್ನು ಹಿಡಿದು ಸೆಲ್ವಿಯವರ ಸುತ್ತ ಹಿಡಿದು ನಿಲ್ಲುವಂತೆ ಸೂಚಿಸಿದರು. ಇದಾದ 7-8 ನಿಮಿಷಗಳ ನಂತರ ಸೆಲ್ವಿ ಹೆಣ್ಣು ಮಗುವಿಗೆ ಜನ್ಮವಿತ್ತರು. ಸ್ವಲ್ಪ ಸಮಯದ ಬಳಿಕ ಆಂಬುಲೆನ್ಸ್ ಬಂತು. ಅದರಲ್ಲಿ ತಾಯಿ-ಮಗುವನ್ನು ವಾಣಿವಿಲಾಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಇವರ ಕರ್ತವ್ಯ ಪ್ರಜ್ಞೆಯಿಂದ ಸುಸೂತ್ರ ಹೆರಿಗೆಗೆ ಕಾರಣವಾಯಿತು. ಇದು ಇಲಾಖೆಗೂ ಒಳ್ಳೆಯ ಹೆಸರು ತಂದುಕೊಟ್ಟಿತು. ಸ್ವತಃ ಗೃಹ ಸಚಿವರೇ ಇಂದು ಎಸ್‌ಐಗೆ ಫೋನ್ ಮಾಡಿ ಶಹಭಾಸ್‌ಗಿರಿ ಹೇಳಿದರು.

ಬೆಳಗ್ಗೆ ಗೃಹ ಸಚಿವರಿಂದ ಫೋನ್ ಬರುತ್ತದೆ ಎಂದು ಗೋಪಾಲಕೃಷ್ಣ ಅವರು ನಿರೀಕ್ಷಿಸಿರಲಿಲ್ಲ. ದಿಢೀರ್ ಎಂದು ಗೃಹ ಸಚಿವರೇ ಫೋನ್ ಮಾಡಿ ಅಭಿನಂದಿಸಿದಾಗ ತಾವು ಮಾಡಿದ ಕೆಲಸ ಸಾರ್ಥಕವಾಯಿತು ಎಂದು ಮನದಲ್ಲಿ ಅಂದುಕೊಂಡರು. ಅವರ ಕುಟುಂಬದವರು ಕೂಡ ಇವರ ಕೆಲಸವನ್ನು ಮೆಚ್ಚಿ ಅಭಿನಂದಿಸಿದರು. ಬ್ಯಾಟರಾಯನಪುರ ಠಾಣಾ ಸಿಬ್ಬಂದಿಗಳೂ ಕೂಡ ಇವರ ಕೆಲಸವನ್ನು ಮೆಚ್ಚಿ ಶ್ಲಾಘಿಸಿದ್ದಾರೆ.

Write A Comment