ಬೆಂಗಳೂರು: ಎಸ್‌ಐ ಜಗದೀಶ್ ಅವರನ್ನು ಹತ್ಯೆಗೈದಿದ್ದ ಹಂತಕರು, ಬಳಿಕ ಅವರಿಂದ ಕದ್ದೊಯ್ದಿದ್ದ ರಿವಾಲ್ವರ್ ಅನ್ನು ಮಂತ್ರಾಲಯದ ವಸತಿಗೃಹವೊಂದರ ಶೌಚಾಲಯದ ಪ್ಲಶ್‌ನಲ್ಲಿ ಬಚ್ಚಿಟ್ಟಿದ್ದರು ಎಂಬ ಸಂಗತಿ ವಿಚಾರಣೆಯಿಂದ ಬಯಲಾಗಿದೆ.
ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ತನಿಖಾಧಿಕಾರಿಗಳು, ಹಂತಕರನ್ನು ಭಾನುವಾರ ಮಂತ್ರಾಲಯಕ್ಕೆ ಕರೆದೊಯ್ದಿದ್ದರು.
‘ಜಗದೀಶ್ ಅವರನ್ನು ಹತ್ಯೆಗೈದ ಬಳಿಕ ಅವರಿಂದ ರಿವಾಲ್ವರ್ ಕಿತ್ತುಕೊಂಡಿದ್ದೆ. ನಂತರ ಮಂತ್ರಾಲಯಕ್ಕೆ ಹೋಗಿ ನಾವು ಉಳಿದುಕೊಂಡಿದ್ದ ‘ಶ್ರೀಕರ ವಸತಿಗೃಹ’ದ ಕೊಠಡಿಯ (ಸಂಖ್ಯೆ 208) ಶೌಚಾಲಯದ ಪ್ಲಶ್‌ನಲ್ಲಿ ಅದನ್ನು ಬಚ್ಚಿಟ್ಟಿದ್ದೆ’ ಎಂದು ಆರೋಪಿ ಮಧು ಒಪ್ಪಿಕೊಂಡಿದ್ದಾನೆ ಎಂದು ಕೇಂದ್ರ ವಿಭಾಗದ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದರು.
‘ತಪ್ಪಿಸಿಕೊಂಡು ಓಡುತ್ತಿದ್ದಾಗ ಮೊದಲು ಜಗದೀಶ್ ಅವರ ಕೈಗೆ ಹರೀಶ್‌ಬಾಬು ಸಿಕ್ಕ. ಆಗ ಜಗದೀಶ್ ಅವರು ಹರೀಶ್‌ನ ಕೊರಳಪಟ್ಟಿ ಹಿಡಿಯುತ್ತಿದ್ದಂತೆ ಅವರು ಕಾಲು ಜಾರಿ ಕಾಲುವೆಗೆ ಬಿದ್ದರು. ಈ ವೇಳೆ ಹರೀಶ್ ಚಾಕುವಿನಿಂದ ಅವರಿಗೆ ಇರಿದ. ಆಗ ಜಗದೀಶ್ ಗುಂಡು ಹಾರಿಸಬಹುದು ಎಂಬ ಭಯದಿಂದ ರಿವಾಲ್ವರ್ ಕಿತ್ತುಕೊಂಡೆ’ ಎಂದು ಮಧು ಹೇಳಿಕೆ ನೀಡಿದ್ದಾನೆ ಎಂದು ಹೇಳಿದರು.
ಹಂತಕರನ್ನು ಸೋಮವಾರ ವಾಪಸ್ ನಗರಕ್ಕೆ ಕರೆತರಲಾಗುವುದು. ಜಗದೀಶ್ ಅವರ ಹತ್ಯೆಗೆ ಬಳಸಿದ್ದ ಚಾಕುವನ್ನು ಎಲ್ಲಿಟ್ಟಿದ್ದಾರೆ ಎಂಬ ಬಗ್ಗೆ ಬಾಯಿ ಬಿಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಹತ್ಯೆ ನಂತರ ಅರೋಪಿಗಳು, ಕರ್ನೂಲಿನ ಚಿನ್ನಾಭರಣ ವ್ಯಾಪಾರಿ ಹನುಮಂತರಾಮುಗೆ 15 ಗ್ರಾಂ ಚಿನ್ನದ ಸರ ಕೊಟ್ಟು ಆತನಿಂದ 5 ಸಾವಿರ ಪಡೆದು ಮಂತ್ರಾಲಯಕ್ಕೆ ತೆರಳಿದ್ದರು. ಈ ಸಂಬಂಧ ಹನುಮಂತರಾಮುವಿನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
