ನವದೆಹಲಿ: ಕರುಳು ಸಂಬಂಧಿ ಕಾಯಿಲೆಯಿಂದ ನರಳುತ್ತಿರುವ ಪಾಕ್ ಮೂಲದ ಐದು ವರ್ಷದ ಬಾಲಕಿ ಬಸ್ಮಾ ಮಹಮ್ಮದ್ ಫೈಸಲ್ ಅವರಿಗೆ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಸ್ಕಟ್‌ನ ರಾಯಲ್ ಆಸ್ಪತ್ರೆಯಲ್ಲಿ ಬಸ್ಮಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಅವಳು ಆಹಾರ ಸೇವಿಸುತ್ತಿಲ್ಲ. ಆಹಾರ ನೀಡಿದ ಕೂಡಲೇ ವಾಂತಿ ಮಾಡಿಕೊಳ್ಳುತ್ತಿದ್ದಾಳೆ. ಮೇದೋಜೀರಕ ಗ್ರಂಥಿ (ಸಣ್ಣ ಕರುಳಿಗೆ ಜೀರ್ಣರಸ ಒದಗಿಸುವ) ಕೆಲಸ ಮಾಡುವುದನ್ನು ಭಾಗಶ: ನಿಲ್ಲಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕಳೆದ 10 ದಿನಗಳಿಂದ ಭಾರತದ ವೀಸಾಕ್ಕಾಗಿ ಪ್ರಯತ್ನಿಸುತ್ತಿದ್ದು, ಕೈಗೆ ಸಿಕ್ಕ ತಕ್ಷಣವೇ ಭಾರತಕ್ಕೆ ಹೊರಡಲಿದ್ದೇವೆ ಎಂದು ಅವರ ತಂದೆ ಮಹಮ್ಮದ್ ಫೈಸಲ್ ರಾಜಾ ತಿಳಿಸಿದ್ದಾರೆ.
