ದೊಡ್ಡಬಳ್ಳಾಪುರ.ಅ.17: ಒಂದೆಡೆ ಜನರ ಆಕ್ರೋಶ, ಆವೇಶ ಮತ್ತೊಂದೆಡೆ ಕುಟುಂಬದ ಸದಸ್ಯರ ಆಂಕ್ರಧನದ ನಡುವೆಯೇ ನಿನ್ನೆ ಕಳ್ಳರಿಂದ ಹತ್ಯೆಯಾದ ದೊಡ್ಡಬಳ್ಳಾಪುರ ನಗರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಜಗದೀಶ್ ಅಂತ್ಯಕ್ರಿಯೆ ಹುಟ್ಟೂರಾದ ಮಲ್ಲಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನಿನ್ನೆ ಬೈಕ್‍ಕಳ್ಳರನ್ನು ಹಿಡಿಯಲು ಹೋಗಿ ಬರ್ಬರವಾಗಿ ಹತ್ಯೆಯಾದ ಸಬ್‍ಇನ್ಸ್‍ಪೆಕ್ಟರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸುತ್ತ ಮುತ್ತಲ ಗ್ರಾಮಸ್ಥರು, ಸೇವೆ ಸಲ್ಲಿಸುತ್ತಿದ್ದ ದೊಡ್ಡಬಳ್ಳಾಪುರ ಸೇರಿದಂತೆ ಸುತ್ತ ಮುತ್ತಲ ಠಾಣೆಯ ಸಿಬ್ಬಂದಿಗಳು, ಸ್ನೇಹಿತರು ಅಗಲಿದ ದಕ್ಷ ಅಧಿಕಾರಿಯ ಅಂತಿಮ ದರ್ಶನಪಡೆದು ಕಣ್ಣೀರು ಹಾಕಿದ ದೃಶ್ಯ ಕಲ್ಲೆದೆಯವರನ್ನೂ ಕರಗಿಸುವಂತೆ ಇತ್ತು.
ಎಸ್‍ಐ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನಡೆಸಿದ ಬಂದ್ ಯಶಸ್ವಿಯಾಗಿದೆ. ಸಾವಿರಾರು ಮಂದಿ ಅಂಗಡಿ ಮುಗ್ಗಟ್ಟು ಮುಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅಗಲಿದ ಜಗದೀಶ್‍ಗೆ ನಮನ ಸಲ್ಲಿಸಿದರು.
ಹುಟ್ಟೂರಾದ ಮಲ್ಲಾಪುರದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್,ಕೃಷ್ಣ ಬೈರೇಗೌಡ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ,ಸಾಂಸದ ವೀರಪ್ಪ ಮೋಯಿಲಿ, ಶಾಸಕರಾದ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ, ಮಾಜಿ ಶಾಸಕ ವಾಟಾಳ್ ನಾರಾಜ್, ಎಂ,ವಿ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ದಕ್ಷ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು.
ಆಕ್ರೋಶ
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಡಿ,ಕೆ ಶಿವಕುಮಾರ್ ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಾಪುರದಲ್ಲಿ ಸ್ಮಶಾನ ಮೌನ ಆವರಿಸಿತ್ತು, ಮಗನ ಅಗಲಿಕೆ ತಾಳಲಾರದೆ ಮೃತ ಜಗದೀಶ್ ತಾಯಿ ಅಸ್ವಸ್ಥರಾದರು ಅವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಲಾಯಿತು.
ಪರಿಹಾರ ಪ್ರಕಟ:
ಅಂತ್ಯ ಸಂಸ್ಕಾರದಲ್ಲಿ ಬಾಗಿಯಾಗಿದ್ದ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಪೋಲಿಸ್ ಇಲಾಖೆಯಿಂದ 30 ಲಕ್ಷ ರೂಪಾಯಿ, ಸಾಮೂಹಿಕ ವಿಮೆಯಿಂದ 20 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ಪರಿಹಾರ,ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ,ನಿವೇಶನ, ಜಗದೀಶ್ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ ಸರ್ಕಾರವೇ ಭರಿಸಲಿದೆ, ಅಲ್ಲದೆ ನಿವೃತ್ತಿಯಾಗುವ ವರೆಗೂ ಸಂಪೂರ್ಣ ವೇತನವನ್ನು ಕುಟುಂಬದ ಸದಸ್ಯರಿಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
